

ಹೈದರಾಬಾದ್: ಎನ್ಟಿಆರ್ ಕುಟುಂಬ ಮತ್ತು ಚಿರಂಜೀವಿ ಅವರ ಕುಟುಂಬದ ನಡುವೆ ಎಲ್ಲವೂ ಸರಿ ಇಲ್ಲ. ಎರಡೂ ಕುಟುಂಬಗಳ ನಡುವೆ ಪೈಪೋಟಿ, ವೈರತ್ವ ಇದೆ ಎಂಬ ಮಾತುಗಳು ಕಳೆದ ಮೂರು ದಶಕಗಳಿಂದ ಕೇಳಿ ಬರುತ್ತಲೇ ಇದೆ. ಹೀಗಿರುವಾಗಲೇ, ಎನ್.ಟಿ.ಆರ್ ಕುಟುಂಬದ ತಾರಕ್ (ಜ್ಯೂನಿಯರ್ ಎನ್ಟಿಆರ್) ಮತ್ತು ಚಿರಂಜೀವಿ ಅವರ ಮಗ (ರಾಮ್ಚರಣ್ ತೇಜ) ಇಬ್ಬರೂ ಒಟ್ಟಿಗೆ 'RRR' ಚಿತ್ರದಲ್ಲಿ ನಟಿಸಿದ್ದರು.
ಅವರಿಬ್ಬರೂ ಒಟ್ಟಿಗೆ ನಟಿಸಿದ್ದು ಹೇಗೆ ಮತ್ತು ಅವರಿಬ್ಬರನ್ನೂ ರಾಜಮೌಳಿ ಒಪ್ಪಿಸಿಕೊಂಡು ಕರೆದುಕೊಂಡು ಬಂದಿದ್ದು ಹೇಗೆ ಎಂಬ ಕುತೂಹಲಕ್ಕೆ ಸಹಜವಾಗಿಯೇ ಎಲ್ಲರಲ್ಲೂ ಇತ್ತು. ಆ ಪ್ರಶ್ನಗ ಸ್ವತಃ ತಾರಕ್ ಮತ್ತು ರಾಮ್ಚರಣ್ ತೇಜ ಮೊದಲ ಬಾರಿಗೆ ಮಾತನಾಡಿದ್ದಾರೆ.
ಅಮೆರಿಕಾದಲ್ಲಿ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಹಾಜರಿದ್ದು ಮಾತನಾಡಿರುವ ಅವರು, ಈ ವೈರತ್ವದ ವಿಷಯ ಕೇಳಿಕೇಳಿ ಸುಸ್ತಾಗಿದ್ದರಿಂದ ಜತೆಯಾಗಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಮ್ಚರಣ್, 'ನಾವಿಬ್ಬರೂ ಒಟ್ಟಾಗಿ ಸಿನಿಮಾ ಮಾಡುವುದಕ್ಕೆ ಕಾರಣವೇ ಈ ವೈರತ್ವದ ವಿಷಯ. ಬಹಳ ವರ್ಷಗಳಿಂದ ಈ ವಿಷಯ ಕೇಳಿಕೇಳಿ ಸಾಕಾಗಿತ್ತು. ಇದಕ್ಕೆ ಅಂತ್ಯ ಹಾಡಬೇಕಿತ್ತು. ಇದನ್ನು ಮುಂದುವರೆಸುವುದಕ್ಕಿಂತ ನಾವಿಬ್ಬರೂ ಒಂದಾಗಿ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಈ ಸಿನಿಮಾ ಮಾಡಿದೆವು' ಎನ್ನುತ್ತಾರೆ.
ಇನ್ನು, ಈ ಬಗ್ಗೆ ಮಾತನಾಡುವ ತಾರಕ್, 'ಇದು ಸರಳವಾದ ಫಿಸಿಕ್ಸ್. ವಿರುದ್ಧ ದಿಕ್ಕುಗಳು ಪರಸ್ಪರ ಆಕರ್ಷಿಸುತ್ತವೆ ಎಂಬ ಮಾತಿನಂತೆ, ನನ್ನಲ್ಲಿ ಏನಿಲ್ಲವೋ ಅದರತ್ತ ಆಕರ್ಷಿತನಾಗುತ್ತಾನೆ. ಚರಣ್ನಲ್ಲಿ ಏನಿಲ್ಲವೋ ಅದರಿಂದ ಅವನು ಆಕರ್ಷಿತನಾಗುತ್ತಾನೆ. ನಾವಿಬ್ಬರೂ ಈ ವಿಷಯದಲ್ಲಿ ನಮ್ಮಲ್ಲಿ ಇಲ್ಲದಿದ್ದನ್ನು ಇನ್ನೊಬ್ಬರಲ್ಲಿ ಕಂಡುಕೊಂಡಿದ್ದೇವೆ. ಇದೊಂದು ಸಪೋರ್ಟ್ ಸಿಸ್ಟಂ ಇದ್ದಂತೆ' ಎಂದು ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ದೂರ ಇದ್ದ ಇಬ್ಬರು ಸ್ಟಾರ್ ನಟರು, ಈಗ ಬಹಳ ಹತ್ತಿರವಾಗಿದ್ದಾರೆ. ಅದಕ್ಕೆ ಕಾರಣ, 'RRR' ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.
ಅಂದಹಾಗೆ, ಅವರಿಬ್ಬರೂ ಜತೆಯಾಗಿ ನಟಿಸಿರುವ 'RRR' ಚಿತ್ರವು ಇತ್ತೀಚೆಗೆ 28ನೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ನ ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ಜತೆಗೆ 'ನಾಟು ನಾಟು' ಹಾಡಿಗೆ ಅತ್ಯುತ್ತಮ ಗೀತೆ ಪ್ರಶಸ್ತಿ ದೊರೆತಿದೆ.