

ಮುಂಬೈ: ತಮನ್ನಾ ಭಾಟಿಯಾ, ತಮ್ಮ 15ನೇ ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್ ಡೆಬ್ಯೂ ಮಾಡಿದರು. ಈಗ ಅವರಿಗೆ 32 ವರ್ಷ. ಕಳೆದ 17 ವರ್ಷಗಳ ಕರಿಯರ್ನಲ್ಲಿ ಕನ್ನಡ, ಹಿಂದಿ, ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಅವರಿಗೆ ಕೈತುಂಬ ಆಫರ್ಗಳಿವೆ. ಇದರ ನಡುವೆಯೇ ಕೆಲವು ದಿನಗಳಿಂದ ಅವರ ಡೇಟಿಂಗ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ವೈರಲ್ ಆದ ವಿಡಿಯೋವೊಂದು ವದಂತಿಗೆ ರೆಕ್ಕೆಪುಕ್ಕ ನೀಡಿತು.
ಗೋವಾದಲ್ಲಿ ಹೊಸ ವರ್ಷಾಚರಣೆ ವೇಳೆ ತಮನ್ನಾ ಮತ್ತು ನಟ ವಿಜಯ್ ವರ್ಮಾ ಲಿಪ್ಲಾಕ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಇಎಲ್ಎಲ್ಇ ಇಂಡಿಯಾ ಗ್ರಾಜುಯೇಟ್ 2022 ಈವೆಂಟ್ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಮನ್ನಾ ಪ್ರಶಸ್ತಿ ಹಿಡಿದು ಮಾಧ್ಯಮಗಳಿಗೆ ಪೋಸ್ ನೀಡಿದ್ದು, ಅವರ ಹಿಂದೆಯೇ ವಿಜಯ್ ವರ್ಮಾ ಇರುವುದು ವದಂತಿಗೆ ಅಧಿಕೃತ ಮುದ್ರೆ ಬೀಳುವ ಸೂಚನೆ ನೀಡಿದೆ.
ವಿಜಯ್, ತಮನ್ನಾ ಬಳಿಗೆ ಹೋಗಿ, ನಗುತ್ತಲೆ ಅಪ್ಪಿಕೊಂಡರು. ಬಳಿಕ ಅಲ್ಲಿಂದ ಹೊರಡುವಾಗ ವಿಜಯ್ ಅವರು ತಮನ್ನಾ ಕೈಕುಲುಕಿದರು. ಇಷ್ಟೇ ಅಲ್ಲದೆ, ಇಬ್ಬರು ಒಟ್ಟಿಗೆ ಕುಳಿತು ಕ್ಯಾಮೆರಾಗೆ ಪೋಸ್ ಸಹ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲ ಅಭಿಮಾನಿಗಳಿಗೆ ಅಸಮಾಧಾನವನ್ನು ತರಿಸಿದೆ. ಅಲ್ಲದೆ, ಡೇಟಿಂಗ್ ವದಂತಿಗಳ ಬಗ್ಗೆ ಅನೇಕರು ನಟಿಯನ್ನು ಲೇವಡಿ ಮಾಡಿದ್ದಾರೆ.
ಇಬ್ಬರ ಜೋಡಿ ಚೆನ್ನಾಗಿಲ್ಲ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದರೆ, ತಮನ್ನಾ ನೀವು ಇನ್ನೂ ಉತ್ತಮಕ್ಕೆ ಅರ್ಹರು ಎಂದು ಮತ್ತೊಬ್ಬ ಅಭಿಮಾನಿ ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಅನೇಕರು ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ತಮನ್ನಾ ಆಯ್ಕೆಯ ಬಗ್ಗೆ ಬೇಸರ ಹೊರಹಾಕಿದ್ದಾರೆ.
ನಟಿ ತಮನ್ನಾ ಗೋವಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ದು, ಈ ವೇಳೆ ವಿಜಯ್ ವರ್ಮಾರನ್ನು ತಬ್ಬಿಕೊಂಡು, ಕಿಸ್ ಮಾಡಿರುವ ದೃಶ್ಯ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ, ಇತ್ತೀಚೆಗಷ್ಟೇ ಇಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಗಲ್ಲಿ ಬಾಯ್ ಚಿತ್ರದ ನಟ ವಿಜಯ್ ವರ್ಮಾ ಕಳೆದ ಡಿ.21ರಂದು ತಮನ್ನಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ್ದರು.
ಸಿನಿಮಾ ವಿಚಾರಕ್ಕೆ ಬಂದರೆ, ತಮನ್ನಾ ಅವರು 2023 ರಲ್ಲಿ ತೆಲುಗು ಚಿತ್ರ ಭೋಲಾ ಶಂಕರ್, ಹಿಂದಿ ಚಿತ್ರ ಬೋಲೆ ಚುಡಿಯನ್ ಮತ್ತು ಮಲಯಾಳಂ ಚಿತ್ರ ಬಾಂದ್ರಾದಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್)