ಬಿಗ್​ಬಾಸ್​-ನಟ ಕಿಚ್ಚ ಸುದೀಪ್​ ಕುರಿತು ಹೇಳಿಕೆ; ಯಾರೋ ನನ್ನ ಮಾತುಗಳನ್ನು ತಿರುಚಿದ್ದಾರೆ ಎಂದ ರಕ್ಷಕ್​ ಬುಲೆಟ್​

Kichcha rakshak
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​​ 10 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ರಕ್ಷಕ್​ ಬುಲೆಟ್​ ಕೆಲವೇ ವಾರಗಳಲ್ಲಿ ದೊಡ್ಮನೆಯಿಂದ ಎಲಿಮಿನೇಟ್​ ಆಗಿ ಹೊರಬಂದರು. ಮನೆಯಿಂದ ಹೊರ ಬರ್ತಿದ್ದಂತೆ ಖಾಸಗಿ ಸುದ್ದಿ ವಾಹಿನಿಗಳಲ್ಲಿ ನೀಡಿದ ಸಂದರ್ಶನಗಳಲ್ಲಿ ಬಿಗ್​ಬಾಸ್​ ಹಾಗೂ ನಟ ಕಿಚ್ಚ ಸುದೀಪ್​ ಕುರಿತು ಹೇಳಿಕೆಗಳನ್ನು ನೀಡಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದರು.

ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆಗಿ ಬಂದ ಬಳಿಕ ಅವರು ಕೆಲವು ಕಡೆಗಳಲ್ಲಿ ನೀಡಿದ ಸಂದರ್ಶನದಲ್ಲಿ ಆಡಿದ ಮಾತುಗಳು ಟೀಕೆಗೆ ಒಳಗಾಗಿವೆ. ಅದರಲ್ಲೂ ಕಿಚ್ಚ ಸುದೀಪ್​ ಬಗ್ಗೆ ರಕ್ಷಕ್​ ನೀಡಿದ ಹೇಳಿಕೆಗಳಿಗೆ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಕಳೆದ ವಾರ ಎಲಿಮಿನೇಟ್​ ಆದ ಸ್ಫರ್ಧಿಗಳನ್ನು ಅತಿಥಿಗಳಾಗಿ ಬಿಗ್​ಬಾಸ್​ ಮನೆಯೊಳಗೆ ಕಳಿಸಿಕೊಡಲಾಗಿತ್ತು. ಬಿಗ್​ಬಾಸ್​ ಮನೆಯೊಳಗೆ ರಕ್ಷಕ್​ ನೀಡಿದ್ದ ಹೇಳಿಕೆಗಳು ನಿರೂಪಕ ಕಿಚ್ಚ ಸುದೀಪ್​ ಅವರ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಸ್ಪರ್ಧಿ ಹೆಸರು ರಕ್ಷಕ್​ ಅಲ್ವಾ? ಬುಲೆಟ್ ಪ್ರಕಾಶ್​ ಅವರ ಮಗ ಅಲ್ವಾ..?​​ ನಿಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ’ ಎಂದು ಗರಂ ಆಗಿದ್ದರು.

ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ರಕ್ಷಕ್​, ನಿಮ್ಮ ಹತ್ತಿರ ನಾನು ನನ್ನ ಮನದಾಳದ ಮಾತು ಹಂಚಿಕೊಳ್ಳೋಣ್ಣಂತ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಾನು ನಟ ಬುಲೆಟ್ ಪ್ರಕಾಶ್ ಅವರ ಮಗ, ನನ್ನ ತಂದೆ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ, ಇಡೀ ರಾಜ್ಯದ ಜನತೆ ಅವರನ್ನು ಹರಸಿ ಹಾರೈಸಿ ಅತ್ಯಂತ ಉನ್ನತ ಸ್ಥಾನಕ್ಕೆ ಬೆಳೆಸಿದ್ದಾರೆ. ಅವರ ಮಗನಾಗಿ ಜನಿಸಿರುವುದು ನನ್ನ ಜನ್ಮ ಜನ್ಮಗಳ ಸುಕೃತ. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ ನನಗೆ ನನ್ನ ತಂದೆ ಇಲ್ಲೇ ನನ್ನ ಜೊತೆಯೇ ಇದ್ದಾರೆಂದೇ ಈಗಲೂ ಅನಿಸುತ್ತದೆ. ಅವರಿದ್ದಾಗ ಎಂದೂ ಅವವರನ್ನು ಬಿಟ್ಟು ನಾನು ಇದ್ದಿದ್ದೇ ಇಲ್ಲ, ಆ ಕಾರಣಕ್ಕೋ ಏನೋ ಅವರಲ್ಲಿರುವ ಒಂದು ಗುಣ ನೇರ ನುಡಿ ನನಗೂ ಬಂದಿದೆ.

Rakshak bullet

ರಾಜ್ಯದ ಜನತೆ ತಂದೆಗೆ ಕೊಟ್ಟಿರುವ ಪ್ರೀತಿಯನ್ನು ನನಗೂ ಕೊಟ್ಟಿದ್ದಾರೆ. ನಾನು ಖಂಡಿತವಾಗಲೂ ಎಲ್ಲರಿಗೂ ಚಿರಋಣಿ. ಇತ್ತೀಚಿನ ದಿನಗಳಲ್ಲಿ ನನ್ನ ಹೇಳಿಕೆಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುತ್ತಿದ್ದಾರೆ ಅದರಿಂದ ನನಗೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸೆಯಾಗುತ್ತಿದ್ದು, ನಾನು ಯಾರ ಭಾವನೆಗೂ ಧಕ್ಕೆ ತರುವ ಹೇಳಿಕೆಗಳನ್ನಾಗಲಿ ಹಾಗೂ ಯಾರ ಮನಸ್ಸಿಗೂ ನೋವಾಗುವಂತ ಹೇಳಿಕೆಗಳನ್ನಾಗಲಿ ನೀಡುವುದನ್ನು ಅಭ್ಯಾಸ ಮಾಡಿಕೊಂಡಿಲ್ಲ.
ಎಲ್ಲೇ ಹೋದರು ನನ್ನನ್ನು ರಾಜ್ಯದ ಜನ ಗುರುತಿಸಿ ಪ್ರೀತಿಸಿದ್ದಾರೆ.

ಒಂದು ಶುಭ ಸುದ್ದಿಯೆಂದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಿನಿಮಾಗಳಿಗೆ ಅವಕಾಶ ಬಂದಿದ್ದು ಈಗಾಗಲೇ ಅದೇ ಕೆಲಸದಲ್ಲಿ ಸಕ್ರಿಯವಾಗಿದ್ದು ಬರುವಂತಹ ದಿನಗಳಲ್ಲಿ ನನ್ನ ಪರಿಶ್ರಮದಿಂದ ಚಿತ್ರಗಳ ಮೂಲಕ ತಮ್ಮನ್ನು ರಂಜಿಸಿ ತಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತೇನೆ. ಎಲ್ಲಾ ಚಿತ್ರರಂಗದ ಹಿರಿಯರು, ನಮ್ಮ ಮಾರ್ಗದರ್ಶಕರು, ಟ್ರೋಲ್ಲರ್ಸ್, ಬ್ಲಾಗರ್ಸ್‌ಗಳು, ಯೂಟ್ಯೂಬರ್ಗಳು ನನಗೆ ಸಾಕಷ್ಟು ಸಹಕಾರ ಬೆಂಬಲ ನೀಡಿದ್ದು, ಇದೇ ರೀತಿ ಮುಂದಿನ ದಿನಗಳಲ್ಲಿ ತಮ್ಮ ಸಹಕಾರ ಬೆಂಬಲ ನನ್ನೊಂದಿಗೆ ಇರಲಿ. ಅತಿ ಶೀಘ್ರದಲ್ಲೇ ಸಾಕಷ್ಟು ಬದಲಾವಣೆಗಳೊಂದಿಗೆ ಹೊಸ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇನೆ ಎಂದು ತಾವು ನೀಡಿದ ಹೇಳಿಕೆಗಳಿಗೆ ರಕ್ಷಕ್​ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net