ಸರ್ಕಾರಿ ಬಸ್​-ಲಾರಿ ನಡುವೆ ಭೀಕರ ರಸ್ತೆ ಅಪಘಾತ; ಇಬ್ಬರು ಮೃತ್ಯು, ಹಲವರಿಗೆ ಗಂಭೀರ ಗಾಯ

Gadag Accident
Published on

ಗದಗ: ಸರ್ಕಾರಿ ಬಸ್​ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ತಮಿಳುನಾಡು ಮೂಲದ ಲಾರಿ ಚಾಲಕ ವಿನೋದ್ ಕುಮಾರ್ (38) ಹಾಗೂ ಕೊಪ್ಪಳದ ಭಾಗ್ಯನಗರದ ನಿವಾಸಿ ಗೀತಾ ಕಲಾಲ್ (40) ಎಂದು ಗುರುತಿಸಲಾಗಿದೆ. ಬಸ್​ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಕೊಪ್ಪಳದಿಂದ ಗದಗದ ಕಡೆಗೆ ಬರುತ್ತಿದ್ದ ಬಸ್ ಹಾಗೂ ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೊರಟಿದ್ದ ಲಾರಿ ನಡುವೆ ಅಪಘಾತವಾಗಿದೆ. ಲಾರಿ ಚಾಲಕ ಹಾಗೂ ಬಸ್‌ನಲ್ಲಿದ್ದ ಮಹಿಳೆ ಸಾವು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಳೆ (ಜನವರಿ 25) ಯಲ್ಲಮ್ಮನ ಗುಡ್ಡದಲ್ಲಿ ಹುಣ್ಣಿಮೆ ಪ್ರಯುಕ್ತ ದೇವಿಯ ದರ್ಶನ ಪಡೆಯಲು ಗೀತಾ ಕಲಾಲ್​ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಮನೆಯಿಂದ ಹೊರಟು ಅರ್ಧ ಗಂಟೆ ಕಳೆಯುವಷ್ಟರಲ್ಲೇ ದುರ್ಘಟನೆ ಸಂಭವಿಸಿದ್ದು, ಮೃತ ಮಹಿಳೆಯ ಸಂಬಂಧಿಕರ ಗೋಳಾಟ ಮುಗಿಲುಮುಟ್ಟಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net