ಮುಸ್ಲಿಂ ಮೀಸಲಾತಿಗಾಗಿ ಸಂವಿಧಾನ ಬದಲಾವಣೆ ಹೇಳಿಕೆ: ಸಂಸತ್ತಿನಲ್ಲಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಬಿಜೆಪಿ! Muslim reservation

Muslim reservation
Published on

Muslim reservation : ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ವಿಚಾರವಾಗಿ ಸಂಸತ್ತಿನಲ್ಲಿ ಇಂದು (ಮಾರ್ಚ್​ 24) ನಡೆದ ಚರ್ಚೆ, ಆಡಳಿತ ಮತ್ತು ವಿಪಕ್ಷಗಳ ನಡುವಿನ ಗದ್ದಲಕ್ಕೆ ಕಾರಣವಾಯಿತು. ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಉಂಟಾದ ಕಾರಣದಿಂದ ಅಧಿವೇಶನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

ಕಾಂಗ್ರೆಸ್​ ನಾಯಕರೊಬ್ಬರು ಮುಸ್ಲಿಮರಿಗೆ ಮೀಸಲಾತಿ ಒದಗಿಸಲು ಸಂವಿಧಾನವನ್ನು ಬದಲಾಯಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಆರೋಪಿಸಿ ಆಡಳಿತಾರೂಢ ಬಿಜೆಪಿ ಸಂಸದರು ಗದ್ದಲ ಎಬ್ಬಿಸಿದಾಗ, ಕಾಂಗ್ರೆಸ್ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾವುದೇ ಶಕ್ತಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಅಂದಹಾಗೆ ಸಂವಿಧಾನ ಬದಲಾವಣೆಯ ಹೇಳಿಕೆಯನ್ನು ನೀಡಿದ್ದು ಬೇರೆ ಯಾರೂ ಅಲ್ಲ, ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 04 ರಷ್ಟು ಮೀಸಲಾತಿ ನೀಡುವ ವಿಚಾರವಾಗಿ ಇತ್ತೀಚೆಗೆ ಮಾತನಾಡಿದ ಡಿಕೆಶಿ, ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದರು. ಇದೇ ಹೇಳಿಕೆ ಇದೀಗ ಭಾರೀ ವಿವಾದಕ್ಕೀಡಾಗಿದೆ. ಅಲ್ಲದೆ, ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ರಾಜ್ಯಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಸಂವಿಧಾನವನ್ನು ತಿರುಚುವ ಕೆಲಸ ಮಾಡುತ್ತಿದೆ ಮತ್ತು ಯಾವುದೇ ಕಾರಣಕ್ಕೂ ಬದಲಾಯಿಸಲು ಬಿಡುವುದಿಲ್ಲ ಎಂದು ಸದಾ ಘೋಷಣೆ ಕೂಗುವ ಕಾಂಗ್ರೆಸ್​ ನಾಯಕರ ಬಾಯಲ್ಲೇ ಇದೀಗ ಸಂವಿಧಾನ ಬದಲಾವಣೆ ಹೇಳಿಕೆ ಬಂದಿರುವುದು ಬಿಜೆಪಿಗೆ ಅಸ್ತ್ರವಾಗಿದೆ.

ಅಂದಹಾಗೆ ಈ ದಿನ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸಂಸದರು ಘೋಷಣೆಗಳನ್ನು ಕೂಗುತ್ತಾ ಸದನದೊಳಗೆ ನುಗ್ಗಲು ಪ್ರಾರಂಭಿಸಿದರು. ಈ ವೇಳೆ ಧನಕರ್​ ಅವರು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ತಾವು ಯಾವುದರ ಬಗ್ಗೆ ಆಂದೋಲನ ನಡೆಸುತ್ತಿದ್ದೀರಿ ಎಂಬುದರ ಕುರಿತು ಮಾತನಾಡಲು ಅವಕಾಶ ನೀಡಿದರು. ಈ ವೇಳೆ ಮಾತನಾಡಿದ ರಿಜಿಜು, ಸಂವಿಧಾನಾತ್ಮಕ ಹುದ್ದೆಯನ್ನು ಹೊಂದಿರುವ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ಮುಸ್ಲಿಮರಿಗೆ ಮೀಸಲಾತಿ ನೀಡಲು ಪಕ್ಷವು ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ ಎಂದರು. ಆದರೆ, ಆ ನಾಯಕನ ಹೆಸರನ್ನು ಹೇಳದಿದ್ದರೂ, ಅವರು ಡಿ ಕೆ ಶಿವಕುಮಾರ್ ಅವರನ್ನು ಉಲ್ಲೇಖಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ.

ಈ ಹೇಳಿಕೆಯನ್ನು ನಾವು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ ಸಚಿವರು, ಈ ಹೇಳಿಕೆಯು ಯಾವುದೇ ಸಾಮಾನ್ಯ ಪಕ್ಷದ ನಾಯಕರಿಂದ ಬಂದಿಲ್ಲ, ಬದಲಾಗಿ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯಿಂದಲೇ ಬಂದಿದೆ ಎಂದು ಹೇಳಿದರು. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ಧರ್ಮಾಧಾರಿತ ಮೀಸಲಾತಿ ಒದಗಿಸಲು ಸಂವಿಧಾನವನ್ನು ಬದಲಾಯಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಿಜಿಜು ಹೇಳಿದರು. ಕಾಂಗ್ರೆಸ್ ನಾಯಕರು ಸಂವಿಧಾನ ಪುಸ್ತಕವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ ಆದರೆ, ಅದನ್ನು ದುರ್ಬಲಗೊಳಿಸಲು ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ರಿಜಿಜು ಟೀಕಾ ಪ್ರಹಾರ ನಡೆಸಿದರು.

ಈ ವಿಚಾರದಲ್ಲಿ ನಿಮ್ಮ ಪಕ್ಷ ಏನನ್ನು ಬಯಸುತ್ತಿದೆ ಎಂದು ಸಭಾಪತಿ ಧನಕರ್​ ಅವರು ಕೇಳಿದಾಗ, ಕಾಂಗ್ರೆಸ್ ಅಧ್ಯಕ್ಷರು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು "ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಸಂವಿಧಾನವನ್ನು ಏಕೆ ಬದಲಾಯಿಸಲು ಬಯಸುತ್ತದೆ ಎಂಬುದನ್ನು ಸದನ ಮತ್ತು ರಾಷ್ಟ್ರಕ್ಕೆ ತಿಳಿಸಬೇಕು" ಎಂದು ರಿಜಿಜು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸದನದ ನಾಯಕ ಮತ್ತು ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ, ಕಾಂಗ್ರೆಸ್ ಸಂವಿಧಾನವನ್ನು ತುಂಡು ತುಂಡಾಗಿ ಹರಿದು ಹಾಕುತ್ತಿದೆ ಎಂದು ಆರೋಪಿಸಿದರು. ಅಂಬೇಡ್ಕರ್ ಅವರು ಭಾರತೀಯ ಸಂವಿಧಾನವನ್ನು ರಚಿಸುವಾಗ "ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ, ಅದು ಭಾರತದ ಸಂವಿಧಾನದ ಅಂಗೀಕೃತ ತತ್ವ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರಿಗೆ ಸರ್ಕಾರಿ ಒಪ್ಪಂದಗಳಲ್ಲಿ ಶೇ.4 ರಷ್ಟು ಮೀಸಲಾತಿ ನೀಡಿದೆ ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ್​ ಖರ್ಗೆ, ಅಂಬೇಡ್ಕರ್ ಒದಗಿಸಿದ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ನಾವು ಸಂವಿಧಾನವನ್ನು ರಕ್ಷಿಸುವ ಜನರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಮಾಡಿದವರು ನಾವು ಮತ್ತು ಭಾರತ್ ತೋಡೋ (ಭಾರತವನ್ನು ಮುರಿಯುವುದು) ನಲ್ಲಿ ನಂಬಿಕೆ ಇಟ್ಟವರು ನೀವು ಎಂದು ಖರ್ಗೆ ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದರು. ಅವರು ಮತ್ತಷ್ಟು ಮಾತನಾಡಲು ಪ್ರಯತ್ನಿಸಿದರು ಆದರೆ ಬಿಜೆಪಿ ಸಂಸದರು ಪದೇ ಪದೇ ಘೋಷಣೆ ಕೂಗಿದ್ದರಿಂದ ಅವರಿಗೆ ಅಡ್ಡಿಯಾಯಿತು. ನಾವು ಭಾರತೀಯ ಸಂವಿಧಾನದ ರಕ್ಷಕರು ಎಂದು ಖರ್ಗೆ ಹೇಳಿದರು.

ರಾಜ್ಯಸಭೆಯಲ್ಲಿ ಈ ವಿಚಾರವಾಗಿ ಆಡಳಿತ ಪಕ್ಷದವರುವ ತೀವ್ರ ಘೋಷಣೆ ಕೂಗುತ್ತಿದ್ದ ಮಧ್ಯೆಯೇ ಸಭಾಪತಿ ಜಗದೀಪ್ ಧನಕರ್​ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.

ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಸಂಸತ್ತಿನಲ್ಲಿ ತಮ್ಮ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಟ್ವೀಟ್​ ಮಾಡುವ ಮೂಲಕ ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. ಹತಾಶೆಗೊಂಡಿರುವ ಬಿಜೆಪಿ, ಅದರ ರಾಜ್ಯ ಮತ್ತು ಕೇಂದ್ರದ ನಾಯಕತ್ವ ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ಪಕ್ಷ ಮತ್ತು ನನ್ನ ಮೇಲೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಮತ್ತು ಅದರ ಸುಳ್ಳು ಸಚಿವರು ಈ ವಿಚಾರಗಳನ್ನು ತಿಳಿದುಕೊಳ್ಳಬೇಕಿದೆ. ಮಸೂದೆಯ ಚರ್ಚೆ ನಡೆದಾಗ ನಾನು ವಿಧಾನಸಭೆಯಲ್ಲಿ ಇರಲಿಲ್ಲ. ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನವನ್ನು ಯಾವುದೇ ರೀತಿಯಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ನಾನು ಎಂದಿಗೂ ಹೇಳಿಲ್ಲ. ಐತಿಹಾಸಿಕವಾಗಿ, ಬಾಬಾ ಸಾಹೇಬ್ ಮತ್ತು ಕಾಂಗ್ರೆಸ್ ಸಂವಿಧಾನವನ್ನು ರಚಿಸಿದರು ಮತ್ತು ಬಿಜೆಪಿಯ ಮಾತೃ ಸಂಸ್ಥೆ ಅದನ್ನು ವಿರೋಧಿಸಿತು. ಕಳೆದ ಸಂಸತ್ತಿನವರೆಗೂ, ಬಿಜೆಪಿ ಸಂವಿಧಾನವನ್ನು ಬದಲಾಯಿಸಲು ಬಯಸಿತ್ತು ಮತ್ತು ಬಡವರು ಮತ್ತು ಹಿಂದುಳಿದವರ ಹಕ್ಕುಗಳನ್ನು ನಿರಾಕರಿಸಲು 400 ಸ್ಥಾನಗಳನ್ನು ಕೇಳುತ್ತಿತ್ತು. ತಮ್ಮ ಪಾಪಗಳನ್ನು ಮರೆಮಾಡಲು, ಅವರೀಗ ಕಾಂಗ್ರೆಸ್ ಮತ್ತು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಮೀಸಲಾತಿಯನ್ನು ಹಿಂದುಳಿದಿರುವಿಕೆಯ ಮಾನದಂಡಗಳ ಆಧಾರದ ಮೇಲೆ ನೀಡಲಾಗುತ್ತದೆ. ಕಾಂಗ್ರೆಸ್​ನ 5 ಗ್ಯಾರಂಟಿಗಳಿಂದ ಬಿಜೆಪಿ ಸಿಟ್ಟಾಗಿದೆ. ಅದು ಬಡವರಿಗೆ ಮತ್ತು ಹಿಂದುಳಿದವರಿಗೆ 52,000 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ವರ್ಗಾಯಿಸುತ್ತದೆ. ಗ್ಯಾರಂಟಿಗಳನ್ನು ಹೇಗಾದರೂ ರದ್ದುಗೊಳಿಸುವುದು ಬಿಜೆಪಿಯ ದುಷ್ಟ ಯೋಜನೆಯಾಗಿದೆ. ಆದರೆ, ಅದು ಎಂದಿಗೂ ಸಂಭವಿಸುವುದಿಲ್ಲ. ನಾನು ಸತ್ತಾಗ ಮಾತ್ರ ಅದು ನಡೆಯಬಹುದು. ಗ್ಯಾರಂಟಿಗಳನ್ನು ರಕ್ಷಿಸಲು ನಾನು ಈ ಹೋರಾಟವನ್ನು ಮುಂದುವರಿಸುತ್ತೇನೆ ಮತ್ತು ಬಿಜೆಪಿಯ ಈ ಪಿತೂರಿಗಳು ನಿರ್ಣಾಯಕವಾಗಿ ವಿಫಲಗೊಳ್ಳುತ್ತವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net