ಬದುಕಿದ್ರೆ ಸಾಕ್ಷಿ ಕೊಡಿ ಎಂದ ಅಧಿಕಾರಿಗಳು...ವಿಶೇಷ ಚೇತನ ಪುತ್ರನನ್ನು ಮೀನಿನ ಬುಟ್ಟಿಯಲ್ಲಿ ಹೊತ್ತುತಂದ ಪಾಲಕರು! Disabled Son

Disabled Son
Published on

Disabled Son : ಆಧುನಿಕವಾಗಿ ಈ ಜಗತ್ತು ತುಂಬಾ ಮುಂದುವರಿಯುತ್ತಿದೆ. ಇದು ಖುಷಿಯ ವಿಚಾರವೇ ಸರಿ. ಏಕೆಂದರೆ, ಕಾಲಕ್ಕೆ ತಕ್ಕಂತೆ ಅಪ್​ಡೇಟ್​ ಆಗಬೇಕಿದೆ. ಆದರೆ, ತನ್ನ ಬೆಳವಣಿಗೆ ಹಾದಿಯಲ್ಲಿ ಮನುಷ್ಯ ಮಾನವೀಯತೆಯನ್ನು ಮರೆಯುತ್ತಿದ್ದಾನೆ. ಈ ತಂತ್ರಜ್ಞಾನದ ಯುಗದಲ್ಲಿ ತನ್ನ ಭಾವನೆಯನ್ನು ಕಳೆದುಕೊಳ್ಳುತ್ತಿರುವ ಮನುಷ್ಯ ಅಕ್ಷರಶಃ ಯಂತ್ರದಂತೆ ವರ್ತಿಸುತ್ತಿದ್ದಾನೆ ಎನ್ನುವುದಕ್ಕೆ ಘಟನೆಯೇ ತಾಜಾ ಉದಾಹರಣೆ.

ಪಾಲಕರು ತಮ್ಮ ವಿಶೇಷ ಚೇತನ ಮಗನನ್ನು ಮೀನಿನ ಬುಟ್ಟಿಯಲ್ಲಿ ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಹೊತ್ತು ತಂದ ಹೃದಯವಿದ್ರಾವಕ ಘಟನೆ ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದಿದೆ.

ವಿಲ್ಲುಪುರಂ ಜಿಲ್ಲೆಯ ಮೇಲ್ಕರನೈ ಮೂಲದ ವೆಂಕಟೇಶನ್ ಮತ್ತು ಅವರ ಪತ್ನಿ ಕಲೈಮಲ್ ತಮ್ಮ ಮಗನನ್ನು ಮೀನಿನ ಬುಟ್ಟಿಯಲ್ಲಿ ಹೊತ್ತುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ತಲುಪಿದರು. ದಂಪತಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರ ಮಕ್ಕಳಾದ ಗೋವಿಂದನ್ (26) ಮತ್ತು ಭುವನೇಶ್ವರಿ (24) ಹುಟ್ಟಿನಿಂದಲೇ ದೈಹಿಕವಾಗಿ ದುರ್ಬಲರು. ಅವರಿಗೆ ಚಲಿಸಲು ಮತ್ತು ಮಾತನಾಡಲು ಸಾಧ್ಯವಾಗುತ್ತಿಲ್ಲ.

ವಿಶೇಷ ಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಆರ್ಥಿಕ ನೆರವು ಕಳೆದ ಆರು ತಿಂಗಳಿನಿಂದ ಮಗನಿಗೆ ಸಿಕ್ಕಿರಲಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿ ಪದೇಪದೆ ವಿನಂತಿಸಿದರೂ ಮತ್ತು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದರೂ ಅಧಿಕಾರಿಗಳಿಂದ ಯಾವುದೇ ಪರಿಹಾರ ಸಿಗಲಿಲ್ಲ.

ಗೋವಿಂದನ್ ಮೃತಪಟ್ಟಿದ್ದಾರೆ ಮತ್ತು ಇನ್ನು ಮುಂದೆ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಆದರೆ, ನಮ್ಮ ಮಗ ಸತ್ತಿಲ್ಲ, ಇನ್ನೂ ಬದುಕಿದ್ದಾನೆ ಎಂದು ಹೇಳಿದರೂ ಕೂಡ ಅಧಿಕಾರಿಗಳು ಮಾತ್ರ ನಂಬುತ್ತಿರಲಿಲ್ಲ. ಅಧಿಕಾರಿಗಳ ಮಾತಿನಿಂದ ನೊಂದುಕೊಂಡ ದಂಪತಿ, ತಮ್ಮ ಮಗ ಜೀವಂತವಾಗಿದ್ದಾನೆ ಎಂದು ಸಾಬೀತುಪಡಿಸಲು ಮಗನನ್ನು ಮೀನಿನ ಬುಟ್ಟಿಯಲ್ಲಿ ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.

ಈ ಘಟನೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳ ಅಮಾನವೀಯತೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net