Vignesh Puthur : ಐಪಿಎಲ್ 2025ರ ಸೀಸನ್ನ ಮೊದಲ ಪಂದ್ಯದಲ್ಲಿ ಮುಂಬೈ ತಂಡದ ಇಂಪ್ಯಾಕ್ಟ್ ಆಟಗಾರನಾಗಿ ಬಂದ ಕೇರಳದ ಮೂಲದ ವಿಘ್ನೇಶ್ ಪುತ್ತೂರು, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು.
ವಿಘ್ನೇಶ್ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 32 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಅದು ಕೂಡ ನಾಯಕ ರಿತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರ ನಿರ್ಣಾಯಕ ವಿಕೆಟ್‌ಗಳಾಗಿದ್ದವು. ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಸೋತರು ಕೂಡ ವಿಘ್ನೇಶ್ ವಾಸ್ತವವಾಗಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ. ಎಸ್. ಧೋನಿ ಅವರಿಂದ ಪ್ರಶಂಸೆಯನ್ನು ಪಡೆದು ಎಲ್ಲರ ಗಮನ ಸೆಳೆದರು.
ಇನ್ನು ಈ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ವಿಘ್ನೇಶ್ ಅವರ ಬಳಿ ಸ್ವತಃ ಧೋನಿಯೇ ಹೋದರು. ಬಳಿಕ ವಿಘ್ನೇಶ್ ಅವರ ಭುಜವನ್ನು ತಟ್ಟಿ ಅಭಿನಂದಿಸಿದರು. ಧೋನಿಯಿಂದ ಮೆಚ್ಚುಗೆ ಪಡೆದ 24 ವರ್ಷದ ವಿಘ್ನೇಶ್ ಮುಖದಲ್ಲಿ ಸಂತೋಷ ಕಾಣಿಸುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಬೇಗನೆ ವೈರಲ್ ಆಗಿದ್ದು, ಈ ಸಂದರ್ಭದಲ್ಲಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಮಾಜಿ ಭಾರತೀಯ ಆಟಗಾರ ಮತ್ತು ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಆ ಕ್ಷಣವನ್ನು ಹೊಗಳಿದರು.
ಅಂದಹಾಗೆ ವಿಘ್ನೇಶ್ ಪುತ್ತೂರು ಎಡಗೈ ಮಣಿಕಟ್ಟಿನ ಸ್ಪಿನ್ನರ್. ವಿಘ್ನೇಶ್ ಪೆರಿಂಥಲ್ಮನ್ನಾದ ಆಟೋ ಚಾಲಕ ಸುನೀಲ್ ಕುಮಾರ್ ಮತ್ತು ಗೃಹಿಣಿ ಕೆ.ಪಿ. ಬಿಂದು ಅವರ ಮಗ. ಕುಟುಂಬದಲ್ಲಿ ಯಾರಿಗೂ ಕ್ರಿಕೆಟ್‌ನೊಂದಿಗೆ ಉತ್ತಮ ಸಂಪರ್ಕವಿಲ್ಲ. ಸ್ಥಳೀಯ ಕ್ರಿಕೆಟ್ ತರಬೇತುದಾರ ವಿಜಯನ್, ವಿಘ್ನೇಶ್ ಅವರಿಗೆ ತರಬೇತಿ ನೀಡಿದರು. ವಿಘ್ನೇಶ್ ಅವರು 14, 19 ಮತ್ತು 23 ವರ್ಷದೊಳಗಿನವರ ವಿಭಾಗಗಳಲ್ಲಿ ಕೇರಳ ಪರ ಆಡಿದ್ದರು. ಆದರೆ, ಹಿರಿಯ ತಂಡಕ್ಕೆ ಕರೆಸಿಕೊಳ್ಳಲಿಲ್ಲ. ಅವರು ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪಲ್ಸ್ ಪರ ಆಡಿದ್ದರು. ಅವರು ಪೆರಿಂಥಲ್ಮನ್ನಾ ಪಿ.ಟಿ.ಎಂ. ಸರ್ಕಾರಿ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.
ಐಪಿಎಲ್ ಹರಾಜಿನಲ್ಲಿ ವಿಘ್ನೇಶ್ ಅವರನ್ನು 30 ಲಕ್ಷ ರೂ.ಗೆ ಮುಂಬೈ ತಂಡಕ್ಕೆ ತರಲಾಯಿತು. ಕೆಸಿಎಲ್ ಪಂದ್ಯಗಳನ್ನು ವೀಕ್ಷಿಸಲು ಬಂದಿದ್ದ ಮುಂಬೈ ಇಂಡಿಯನ್ಸ್‌ನ ಪ್ರತಿಭಾ ಸ್ಕೌಟಿಂಗ್ ತರಬೇತುದಾರ, ವಿಘ್ನೇಶ್ ಅವರನ್ನು ಟ್ರಯಲ್ಸ್‌ಗೆ ಹಾಜರಾಗಲು ಕೇಳಿಕೊಂಡರು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಟ್ರಯಲ್ಸ್‌ನಲ್ಲಿ ಅವರ ಬೌಲಿಂಗ್ ಅನ್ನು ತುಂಬಾ ಇಷ್ಟಪಟ್ಟಿದ್ದಾರೆ. ಆದರೆ, ವಿಘ್ನೇಶ್ ಅವರು ತಂಡದಲ್ಲಿ ಆಯ್ಕೆಯಾಗುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಕೇರಳ ಕೌಮುಡಿ ಮಾಧ್ಯಮಕ್ಕೆ ವಿಘ್ನೇಶ್ ತಿಳಿಸಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ (ಮಾ.23) ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 18ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿ ಗೆಲುವಿಗಾಗಿ ಭರ್ಜರಿ ಪೈಪೋಟಿ ನೀಡಿತು. ರೋಚಕತೆಗೆ ತಿರುಗಿದ ಪಂದ್ಯದಲ್ಲಿ ಅಂತಿಮವಾಗಿ ಸಿಎಸ್ಕೆ ತನ್ನ ಮೊದಲ ಗೆಲುವಿನ ಖಾತೆಯನ್ನು ತೆರೆಯಿತು. ಟಾಸ್ ಗೆದ್ದ ಸಿಎಸ್ಕೆ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ಸೂರ್ಯಕುಮಾರ್ ಯಾದವ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ನ ಸ್ಟಾರ್ ಬ್ಯಾಟರ್ಗಳು ಹೆಚ್ಚು ಕಾಲ ಕ್ರೀಸ್ನಲ್ಲಿ ನಿಂತು ಅಬ್ಬರಿಸುವಲ್ಲಿ ಮುಗ್ಗರಿಸಿದರು. 20 ಓವರ್ ಅಂತ್ಯಕ್ಕೆ ಎಂಐ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ, ಆರಂಭದಲ್ಲಿ ಉತ್ತಮ ರನ್ ಕಲೆಹಾಕಿದ್ದೇ ಆದರೂ ಮಧ್ಯಂತರದಲ್ಲಿ ಪರದಾಡಿತು. ಕಡೆಯ ಓವರ್ವರೆಗೂ ತಲುಪಿದ ಸಿಎಸ್ಕೆ-ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ರೋಚಕ ಹಂತಕ್ಕೆ ತಲುಪಿ, ಸಿಎಸ್ಕೆ ಗೆಲುವಿನ ಮೂಲಕ ಮುಕ್ತಾಯಗೊಂಡಿತು. 4 ವಿಕೆಟ್ಗಳ ಅಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿತು. (ಏಜೆನ್ಸೀಸ್)
ಆ ಒಂದು ಸಣ್ಣ ಸಂಶಯ… ಗರ್ಲ್ಫ್ರೆಂಡ್ ಮತ್ತು ಆಕೆಯ ತಾಯಿಯನ್ನು ಬರ್ಬರವಾಗಿ ಕೊಂದ ಬಾಯ್ಫ್ರೆಂಡ್! Girlfriend