More

    ಅಂಬರೀಷ್ ಸವಿ ನೆನಪು: ರಾಜೇಂದ್ರ ಸಿಂಗ್ ಬಾಬು ಕಲೆ ಹಾಕಿದ ಆ ದಿನಗಳು

    | ಪ್ರಮೋದ ಮೋಹನ ಹೆಗಡೆ

    ಅಂಬರೀಷ್ ಸವಿ ನೆನಪು: ರಾಜೇಂದ್ರ ಸಿಂಗ್ ಬಾಬು ಕಲೆ ಹಾಕಿದ ಆ ದಿನಗಳು

    ನಟ ಅಂಬರೀಷ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದಲ್ಲಿ ‘ಜಲೀಲ’ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಭರವಸೆಯ ನಟನಾಗಿ ಮಿಂಚಿದ್ದರು. ನಂತರ ‘ರಂಗನಾಯಕಿ’, ‘ಮಸಣದ ಹೂವು’ ‘ಚಕ್ರವ್ಯೆಹ’ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಮಾಡಿ, ತಮ್ಮ ಸಹಜ ಅಭಿನಯದಿಂದ ಜನಪ್ರಿಯತೆ ಗಳಿಸಿದರು. ರಾಜಕೀಯದಲ್ಲಿಯೂ ಛಾಪು ಮೂಡಿಸಿದ ನಟ ಅಂಬರೀಷ್. ಅವರ ವೃತ್ತಿ ಜೀವನದಲ್ಲಿ ‘ಅಂತ’ ಸಿನಿಮಾ ಒಂದು ಮೈಲುಗಲ್ಲು. ಆ ಚಿತ್ರದಲ್ಲಿದ್ದ ‘ಕುತ್ತೇ, ಕನ್ವರ್ ನಹೀ..ಕನ್ವರ್‌ಲಾಲ್ ಬೋಲೋ’ ಡೈಲಾಗ್ ಈಗಲೂ ಎಷ್ಟೋ ಜನರ ಬಾಯಲ್ಲಿ ಕೇಳಬಹುದು. ಇಂತಹ ಹಿಟ್ ಸಿನಿಮಾ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ಅಂಬರೀಷ್ ಜತೆಗಿನ ಒಡನಾಟವನ್ನು ವಿಜಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಬಿಜೆಪಿ ಪ್ರಕಾರ ನ್ಯಾಯ ಕೇಳುವುದು ಹಾಗೂ ಪ್ರಶ್ನಿಸುವುದು ದೇಶದ್ರೋಹವಾಗಿ ಬದಲಾಗಿದೆಯೇ?; ರಾಜ್ಯ ಕಾಂಗ್ರೆಸ್ ಪ್ರಶ್ನೆ

    ಮೇಲ್ನೋಟಕ್ಕೆ ಮಾತ್ರ ರಫ್
    ಅಂಬರೀಷ್ ಅವರೊಟ್ಟಿಗಿನ ಮೊದಲ ಭೇಟಿಯ ಬಗ್ಗೆ ರಾಜೇಂದ್ರ ಸಿಂಗ್, ‘ಮೈಸೂರಿನಲ್ಲಿ ನಮ್ಮ ಮನೆಯ ಪಕ್ಕದಲ್ಲೇ ಅಂಬರೀಷ್ ಮನೆ ಇತ್ತು. ನನ್ನ ತಮ್ಮ ಮತ್ತು ಅಂಬರೀಶ್ ಹೆಚ್ಚು ಆಪ್ತರಾಗಿದ್ದರು. ಹೀಗಾಗಿ ಆಗಾಗ ನಮ್ಮ ಮನೆಗೂ ಬರುತ್ತಿದ್ದ ಕಾರಣ ನನಗೂ ಒಳ್ಳೆಯ ಸ್ನೇಹಿತನಾದ. ಒಮ್ಮೆ ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಬಂದ ಅಂಬರೀಷ್, ನಮ್ಮ ಜತೆಯಲ್ಲೇ ಇದ್ದ. ಒಂದೇ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದೆವು. ಬಹುಶಃ ಲಅದರಿಂದಲೇ ನಮ್ಮಲ್ಲಿ ಹೆಚ್ಚು ಆತ್ಮೀಯತೆ ಭಾವ ಮೂಡಿರಬೇಕು’ ಎಂದು ನೆನಪಿಸಿಕೊಳ್ಳುತ್ತಾರೆ. ಅದಲ್ಲದೆ, ‘ಮಜವಾದ ವಿಷಯವೆಂದರೆ, ನನ್ನ ತಾಯಿ ಮೊದಲು ನನಗೆ ಬೈಯುತ್ತಿದ್ದರು. ಅಂಬರೀಷ್ ನೋಡೋಕೆ ರಫ್ ಆಂಡ್ ಟಫ್ ಆಗಿ ಕಾಣಿಸುತ್ತಿದ್ದ ಕಾರಣ ಅವನ ಜತೆ ಸೇರಬೇಡ ಎನ್ನುತ್ತಿದ್ದರು. ವಿಚಿತ್ರ ಎಂದರೆ ಆಮೇಲೆ ನನ್ನ ತಾಯಿಗೇ ಆತ ಹೆಚ್ಚು ಆತ್ಮೀಯವಾಗಿದ್ದ’ ಎನ್ನುತ್ತಾರೆ ಬಾಬು.

    ಸಿನಿಮಾ ಮತ್ತು ಅಂಬಿ
    ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಬಗ್ಗೆ, ‘‘ಬಂಗಾರದ ಕಳ್ಳ’ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿದ್ದ ಅಂಬರೀಷ್. ಬಳಿಕ ಪುಟ್ಟಣ್ಣ ಕಣಗಾಲ್‌ರ ‘ನಾಗರಹಾವು’ ಚಿತ್ರಕ್ಕೆ ಅಂಬರೀಶ್ ಹೆಸರನ್ನು ಸೂಚಿಸಿದ್ದೆ. ಆದರೆ, ಅಂಬರೀಷ್ ನನಗೆ ಸಿನಿಮಾ ಬೇಡವೆಂದು ಎಲ್ಲೋ ಓಡಿ ಹೋಗಿ ಅಡಗಿಕೊಂಡಿದ್ದ. ನಂತರ ನನ್ನ ತಮ್ಮ ಅವನನ್ನು ಹುಡುಕಿದ್ದ’ ಎನ್ನುತ್ತಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.

    ಇದನ್ನೂ ಓದಿ: ಹಾಲಿನ ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? ಜನರಿಗಾಗಿ ಮಾಹಿತಿ ನೀಡಿದ FSSAI

    ಎಲ್ಲರನ್ನು ಸೆಳೆಯುವ ಶಕ್ತಿ ಅವನಲ್ಲಿತ್ತು
    ಅಂಬರೀಷ್ ಬಗ್ಗೆ ಇಷ್ಟವಾಗುವ ಗುಣದ ಬಗ್ಗೆ ಮಾತನಾಡುವ ಅವರು, ‘ಆತನು ಬದುಕಿದ ರೀತಿ, ಮಾತನಾಡುವ ಧಾಟಿ ಎಲ್ಲವೂ ವಿಭಿನ್ನ. ಯಾರ ಬಗ್ಗೆಯೂ ತಲೆ ಕಡಿಸಿಕೊಳ್ಳದೆ ತನ್ನ ಬದುಕನ್ನು ಬದುಕುವ ಗುಣ ಅವನಲ್ಲಿತ್ತು. ಆತ ಕೊನೆವರೆಗೂ ಹಾಗೇ ಇದ್ದ. ಸೆಟ್‌ಗೆ ತಡವಾಗಿ ಬಂದರೆ ಸಹಿಸದ ಪುಟ್ಟಣ್ಣ ಅವರೂ ಅಂಬರೀಷ್​​ಗೆ ಹೊಂದಿಕೊಂಡುಬಿಟ್ಟಿದ್ದರು. ರಾಜಕುಮಾರ್ ಸೇರಿದಂತೆ ಅನೇಕರಿಗೆ ಅವೆಂದರೆ ಅಚ್ಚುಮೆಚ್ಚು. ಅವನಲ್ಲಿ ಅಂತಹದೊಂದು ಸೆಳೆಯುವ ಮ್ಯಾಗ್ನೆಟಿಕ್ ಶಕ್ತಿ ಇತ್ತು. ಯಾರನ್ನೇ ಆದರೂ ಸಂಭಾಳಿಸುತ್ತಿದ್ದ’ ಎನ್ನುತ್ತಾರೆ.

    ‘ಅಂತ’ ಮತ್ತು ಅಂಬರೀಷ್
    ‘ಅಂತ’ ಚಿತ್ರಕ್ಕೆ ಅಂಬರೀಷ್​ರನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಮಾತನಾಡಿದ ಅವರು,‘ನನಗೆ ಹೊಸ ಮುಖ ಬೇಕಿತ್ತು. ರಾಜಕುಮಾರ್, ವಿಷ್ಣುವರ್ಧನ್ ಅವರಿಗೆ ಹೊಂದುವಂತ ಪಾತ್ರ ಅದಾಗಿರಲಿಲ್ಲ. ಆ ಪಾತ್ರಕ್ಕೆ ಹೊಂದಿಕೆಯಾಗುವಂತೆ ಸ್ವಲ್ಪ ಕಪ್ಪು ಬಣ್ಣ, ದೇಹ, ಎತ್ತರ, ಧ್ವನಿ ಎಲ್ಲವೂ ಅಂಬರೀಷ್​ಗಿತ್ತು. ಚಿತ್ರರಂಗದಿಂದ ಅನೇಕರ ವಿರೋಧವಿದ್ದರೂ ನಾನು ಅವನನ್ನೇ ಆಯ್ಕೆ ಮಾಡಿಕೊಂಡೆ’ ಎಂದು ಬಾಬು ಹೇಳಿಕೊಳ್ಳುತ್ತಾರೆ.

    ಇದನ್ನೂ ಓದಿ: ಇನ್ನು ಮುಂದೆ ಬಿಬಿಎಂಪಿಯ ಎಲ್ಲ ಕಾಮಗಾರಿ ವಿಡಿಯೋ ಮಾಡಲು ಡಿಕೆಶಿ ಸೂಚನೆ!

    ಅಂಬಿ ನನ್ನ ಸಹೋದರನಂತೆ..
    ಅಂಬರೀಷ್ ಜತೆಗಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ‘ಅಂಬರೀಷ್ ಒಂದು ವರ್ಷ ನಮ್ಮ ಮನೆಯಲ್ಲಿದ್ದ. ಎಷ್ಟೋ ಸಿಹಿ ಕ್ಷಣಗಳನ್ನು ಕಳೆದಿದ್ದೇವೆ. ಶೂಟಿಂಗ್ ಸಮಯದಲ್ಲಿ ಅದೆಷ್ಟೋ ತಮಾಷೆಗಳನ್ನು ನೊಡಿದ್ದೇವೆ. ‘ಗಂಡಭೇರುಂಡ’ ಚಿತ್ರದ ಸಮಯದಲ್ಲಿ ಹುಲಿ ಜತೆ ಒಂದು ದೃಶ್ಯವಿತ್ತು. ಯಾರೋ ಹೋಗಿ ಅವನಿಗೆ ‘ಧರ್ಮೇಂದ್ರ ಧೈರ್ಯಕ್ಕೆ ರಮ್ ಕುಡಿದು ಹುಲಿ ಜತೆ ಚಿತ್ರೀಕರಣ ಮಾಡಿದ್ದರಂತೆ’ ಎಂದು ಹೇಳಿದ್ದರು. ಅದನ್ನು ಕೇಳಿ ಅಂಬರೀಷ್ ಕೂಡ ಹಾಗೆ ಮಾಡಿದ್ದ. ಇಂತಹ ತಮಾಷೆಗಳ ನಡುವೆ ಎಷ್ಟೋ ಬಾರಿ ಜಗಳವಾಡಿದ್ದೇವೆ, ಮಾತು ಬಿಟ್ಟಿದ್ದೇವೆ. ಪರಿಶುದ್ಧ ಸ್ನೇಹದಲ್ಲಿ ಇವೆಲ್ಲವೂ ಇರುತ್ತದೆ. ಆದರೆ, ಅಂಬರೀಷ್ ನನಗೆ ಸಹೋದರನಂತೆ ಇದ್ದವನು’ ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts