ರಾಜಸ್ಥಾನ ರಾಜಕೀಯ: ಪಕ್ಷಗಳ ವಿಲೀನ ಒಕೆ, ಶಾಸಕರ ವಿಲೀನಕ್ಕೆಲ್ಲಿ ಅವಕಾಶ- ಬಿಎಸ್​ಪಿ ಪ್ರಶ್ನೆ

Ashok Gehlot 16 Feb 20
Published on

ಜೈಪುರ: ರಾಜಸ್ಥಾನ ರಾಜಕೀಯ ದಿನೇದಿನೆ ಕುತೂಹಲ ಮೂಡಿಸುತ್ತ ಸಾಗಿದ್ದು, ಕಳೆದ ವರ್ಷ ಕಾಂಗ್ರೆಸ್​ಗೆ ಸೇರ್ಪಡೆಗೊಂಡ ಆರು ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಬಿಎಸ್​ಪಿ ಈಗ ಪಟ್ಟುಹಿಡಿದಿದೆ. ರಾಜಕಾರಣದಲ್ಲಿ ಪಕ್ಷಗಳ ವಿಲೀನಕ್ಕೆ ಇದೆ ಅವಕಾಶ. ಆದರೆ ಬೇರೆ ಪಕ್ಷದ ಶಾಸಕರನ್ನು ವಿಲೀನಗೊಳಿಸುವುದಕ್ಕೆ ಎಲ್ಲಿದೆ ಅವಕಾಶ ಎಂಬುದು ಬಿಎಸ್​ಪಿಯ ಪ್ರಶ್ನೆ.

ಈ ಸಂಬಂಧ ಆರು ಬಿಎಸ್​ಪಿ ಶಾಸಕರಿಗೆ ನೋಟಿಸ್ ಜಾರಿ ಮಾಡುವಂತೆ ರಾಜಸ್ಥಾನ ಹೈಕೋರ್ಟ್​ನ ವಿಭಾಗೀಯ ಪೀಠ ಗುರುವಾರ ಕೆಳ ನ್ಯಾಯಾಲಯಕ್ಕೆ ಸೂಚಿಸಿದೆ. ಅಲ್ಲದೆ, ಕಳೆದ ವರ್ಷ ಈ ಶಾಸಕರನ್ನು ಕಾಂಗ್ರೆಸ್​ನಲ್ಲಿ ವಿಲೀನಗೊಳಿಸಿದ ಪ್ರಕ್ರಿಯೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ. ಇದರಂತೆ ಕೆಳಹಂತ ಸಿಂಗಲ್ ಬೆಂಚ್ ನ್ಯಾಯಪೀಠ ಸ್ಪೀಕರ್​ ಸಿಪಿ ಜೋಶಿ ಮತ್ತು ಆರು ಬಿಎಸ್​ಪಿ ಶಾಸಕರಿಗೆ ನೋಟಿಸ್ ಜಾರಿಗೊಳಿಸಿ ಆಗಸ್ಟ್​ 11ರೊಳಗೆ ಉತ್ತರಿಸುವಂತೆ ನಿರ್ದೇಶಿಸಿದೆ.

ಶಾಸಕರ ವಿಲೀನವನ್ನು ಎತ್ತಿಹಿಡಿದ ಸ್ಪೀಕರ್​ ನಿರ್ಧಾರವನ್ನು ಪ್ರಶ್ನಿಸಿ ಕಳೆದ ವರ್ಷ ಆಗಸ್ಟ್​ 11ರಂದು ಬಹುಜನ ಸಮಾಜ ಪಕ್ಷ(ಬಿಎಸ್​ಪಿ) ಮತ್ತು ಬಿಜೆಪಿ ಶಾಸಕ ಮದನ್​ ದಿಲಾವರ್ ಕೋರ್ಟ್​ ಮೆಟ್ಟಿಲೇರಿದ್ದರು. ಸ್ಪೀಕರ್ ಸಿಪಿ ಜೋಶಿ ಪರ ನ್ಯಾಯವಾದಿ ಪ್ರತೀಕ್ ಕಾಶಿವಾಲ್ ಹೇಳುವ ಪ್ರಕಾರ, ಈ ಮೇಲ್ಮನವಿ ಪುರಸ್ಕರಿಸಲ್ಪಡುವುದಿಲ್ಲ. ಹೈಕೋರ್ಟ್​ ಈಗಾಗಲೇ ಇವರ ಮೇಲ್ಮನವಿಯನ್ನು ವಿಲೇವಾರಿ ಮಾಡಿದ್ದು, ನೋಟಿಸ್ ನೀಡಿ ಪ್ರತಿಕ್ರಿಯೆ ಪಡೆಯುವಂತೆ ಕೆಳ ನ್ಯಾಯಾಲಯಕ್ಕೆ ಸೂಚಿಸಿದೆ.

ಆಗಸ್ಟ್​ 4 ರಂದು ಈ ಮೇಲ್ಮನವಿ ವಿಭಾಗೀಯ ಪೀಠಕ್ಕೆ ಸಲ್ಲಿಸಲ್ಪಟ್ಟಿತ್ತು. ಬಿಎಸ್​ಪಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಅದು ತನ್ನ ಆರು ಶಾಸಕರ ಕಾಂಗ್ರೆಸ್​ ಸೇರ್ಪಡೆಯನ್ನು ಊರ್ಜಿತಗೊಳಿಸಿದ 2019ರ ಸೆಪ್ಟೆಂಬರ್ 18ರ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿದೆ. ಈ ವಿಲೀನ ಪ್ರಕ್ರಿಯೆ ಅಸಾಂವಿಧಾನಾತ್ಮಕವಾದುದು. ಪಕ್ಷಗಳು ವಿಲೀನಗೊಳ್ಳುತ್ತವೆಯೇ ಹೊರತು, ಶಾಸಕರಲ್ಲ ಎಂಬ ವಾದವನ್ನು ಮುಂದಿಟ್ಟಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net