ಸಂಯೋಜಿತ ಎಚ್​ಐವಿ ಔಷಧ ಬಳಸಿ ಕರೊನಾ​ ರೋಗಿಗೆ ಯಶಸ್ವಿ ಚಿಕಿತ್ಸೆ ನೀಡಿದ ಭಾರತೀಯ ವೈದ್ಯರು!

Corona
Published on

ಜೈಪುರ: ಎಚ್​ಐವಿ, ಹಂದಿ ಜ್ವರ(ಸ್ವೈನ್​ ಫ್ಲೂ) ಮತ್ತು ಮಲೇರಿಯಾ ಔಷಧಗಳ ಸಂಯೋಜನೆಯನ್ನು ಬಳಸಿ ಇಟಾಲಿಯ ಕರೊನಾ ವೈರಸ್​ ಸೋಂಕಿತ ರೋಗಿಗೆ ರಾಜಸ್ಥಾನದ ಸವಾಯಿ ಮಾನ್​ ಸಿಂಗ್​(ಎಸ್​ಎಂಎಸ್​) ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿರುವುದಾಗಿ ವರದಿಯಾಗಿದೆ.

ಚಿಕಿತ್ಸೆಯ ಬಳಿಕ ರೋಗಿಯಲ್ಲಿ ಕರೊನಾ ವೈರಸ್​ ನೆಗಿಟಿವ್​ ಕಂಡುಬಂದಿದೆ. ರಾಜಸ್ಥಾನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಇಟಲಿಯಿಂದ ಭಾರತಕ್ಕೆ ಆಗಮಿಸಿದ್ದ 23 ಮಂದಿಯಲ್ಲಿ ತನ್ನ ಪತಿಯೊಂದಿಗೆ ಆಗಮಿಸಿದ್ದ ಮಹಿಳೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು.

ಮೊದಲ ಗುಂಪಿನ ಪರೀಕ್ಷೆಯಲ್ಲಿ ಮಹಿಳೆಯ ಪತಿಗೆ ಕರೊನಾ ಇರುವುದನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮಾರ್ಚ್​ 3ರಂದು ಖಚಿತಪಡಿಸಿತ್ತು. ದಿನದ ಬೆನ್ನಲ್ಲೇ ಮಹಿಳೆಗೂ ಕೋವಿಡ್​ -19 ಪಾಸಿಟಿವ್​ ಫಲಿತಾಂಶ ಬಂದಿತ್ತು.

ಎಸ್​ಎಂಎಸ್​ ವೈದ್ಯರು ಮಹಿಳೆಗೆ ಎರಡು ಎಚ್​ಐವಿ ಸಂಯೋಜಿತ ಔಷಧದಿಂದ ಚಿಕಿತ್ಸೆ ನೀಡುತ್ತಿದ್ದರು. ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್​ ಕುಮಾರ್​ ಸಿಂಗ್​, ರೋಗಿಗೆ 200 ಎಂಜಿ ಲೊಪಿನವಿರ್​ ಹಾಗೂ 50 ಎಂಜಿ ರಿಟಿನವಿರ್​ ಔಷಧವನ್ನು ದಿನಕ್ಕೆ ಎರಡು ಬಾರಿ ನೀಡುತ್ತಿದ್ದೆವು ಎಂದು ತಿಳಿಸಿದ್ದಾರೆ.

ಎಸ್​ಎಂಎಸ್​ ಆಸ್ಪತ್ರೆ ನೀಡುತ್ತಿರುವ ಎರಡು ಎಚ್​ಐವಿ ಔಷಧ ಸಂಯೋಜನೆಯ ಶಿಷ್ಠಾಚಾರವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಒಪ್ಪಿದೆ. ಇದಲ್ಲದೆ, ಹಂದಿಜ್ವರ ರೋಗಿಗಳಿಗೆ ನೀಡುವ ಒಸೆಲ್ಟಮಿವಿರ್​ ಮತ್ತು ಮಲೇರಿಯಾ ರೋಗಿಗಳಿಗೆ ನೀಡುವ ಕ್ಲೋರೋಕ್ವೀನ್​ ಔಷಧವನ್ನು ಬಳಸಲಾಗುತ್ತಿತ್ತು ಎಂದು ಸಿಂಗ್​ ವಿವರಿಸಿದರು.

ಗುಣಮಟ್ಟದ ಶಿಷ್ಠಾಚಾರ ಅನುಸರಿಸಿ ರೋಗಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತಿದ್ದೆವು. ಹೀಗಾಗಿ ರೋಗಿಯಲ್ಲಿ ಸದ್ಯ ಕೋವಿಡ್-19 ನಗೆಟಿವ್​ ಕಾಣಿಸಿಕೊಂಡಿದೆ. ಇದು ಎಸ್​ಎಂಎಸ್​ ವೈದ್ಯರ ಸಾಧನೆ ಎಂದು ಎಸ್​ಎಂಎಸ್​ ಮೆಡಿಕಲ್​ ಕಾಲೇಜು ಪ್ರಾಂಶುಪಾಲ ಮತ್ತು ಕಂಟ್ರೋಲರ್​ ಡಾ. ಸುಧೀರ್​ ಭಂಡಾರಿ ಮೆಚ್ಚುಗೆ ವ್ಯಕ್ತಪಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net