ರಾಜನಿವಾಸದಲ್ಲಿ ಕೃತಿಕಾ - ಮತ್ತೆ ಬಂದ ಕಿರುತೆರೆಯ ರಾಧಾ

Kruthika Raveendra
Published on

ಬೆಂಗಳೂರು : ಮಿಸ್ಟರಿ ಮತ್ತು ಥ್ರಿಲ್ಲರ್ ಶೈಲಿಯ ಸಿನಿಮಾಗಳತ್ತ ಬಹುತೇಕರ ಒಲವು ಹೆಚ್ಚಾಗುತ್ತಿದೆ. ಇದೀಗ ಅಂಥದ್ದೇ ಕಥೆಯೊಂದಿಗೆ ಬಹುವರ್ಷಗಳ ಬಳಿಕ ಸ್ಯಾಂಡಲ್​ವುಡ್​ಗೆ ಆಗಮಿಸಿದ್ದಾರೆ ನಟಿ ಕೃತಿಕಾ ರವೀಂದ್ರ. ಆ ಚಿತ್ರದ ಹೆಸರು ‘ರಾಜ ನಿವಾಸ’. ಕಿರುತೆರೆ ಮೂಲಕವೇ ಹೆಚ್ಚು ಜನಪ್ರಿಯರಾಗಿದ್ದ ಕೃತಿಕಾ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಮತ್ತು ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಇಷ್ಟವಾದ ಕಥೆ ಸಿಕ್ಕ ಹಿನ್ನೆಲೆಯಲ್ಲಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ.

ತಮ್ಮ ಪಾತ್ರದ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಪುರಾತತ್ವ ಇಲಾಖೆಯ ಪ್ರಾಜೆಕ್ಟ್ ಸಲುವಾಗಿ ಹಳ್ಳಿಯೊಂದಕ್ಕೆ ಬರುತ್ತೇವೆ. ಒಂದಷ್ಟು ರೋಚಕ ಘಟನಾವಳಿಗಳು ಅಲ್ಲಿ ಸಂಭವಿಸುತ್ತವೆ. ಆ ಮಿಸ್ಟ್ರಿ ಸುತ್ತ ನಡೆಯುವ ಕಥೆಯೇ ರಾಜ ನಿವಾಸ’ ಎಂದು ಚಿತ್ರದ ಒಂದೆಳೆಯನ್ನು ಬಿಚ್ಚಿಡುತ್ತಾರೆ ಕೃತಿಕಾ. ಇನ್ನು ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರಿಯುವ ಬಗ್ಗೆಯೂ ಕೃತಿಕಾ ಮಾತನಾಡಿದ್ದಾರೆ. ‘ಧಾರಾವಾಹಿ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಆದರೆ, ಮೊದಲಿಂದಲೂ ಸಿನಿಮಾ ಬಗ್ಗೆ ನನಗೆ ಹೆಚ್ಚಿನ ಒಲವು. ಸಿನಿಮಾಕ್ಕೆ ಅದರದ್ದೇ ಆದ ಫ್ಯಾನ್​ಬೇಸ್ ಇದೆ. ಹಾಗಾಗಿ ನಟನೆ ಮೂಲಕವೇ ಗುರುತಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ’ ಎನ್ನುತ್ತಾರೆ.

ಮಿಥುನ್ ಸುವರ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಜ ನಿವಾಸ’ ಚಿತ್ರದಲ್ಲಿ ರಾಘವ್ ನಾಯಕನಾಗಿ ನಟಿಸುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಆಂಜನಪ್ಪ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಬಲ ರಾಜವಾಡಿ, ಅರ್ಜುನ್ ಪ್ರಮುಖ ತಾರಾಬಳಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net