

ಚೆನ್ನೈ: ಚಿಕಿತ್ಸೆಗಾಗಿ ಕಳೆದ ತಿಂಗಳು ಅಮೆರಿಕಾಗೆ ಹೋಗಿದ್ದ ನಟ ರಜನಿಕಾಂತ್, ಇದೀಗ ವಾಪಸ್ಸಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಚೆನ್ನೈಗೆ ವಾಪಸ್ಸಾದ ಅವರನ್ನು, ಅಭಿನಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು.
ಕಳೆದ ತಿಂಗಳು ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ, ರಜನಿಕಾಂತ್ ಅವರು ಅಮೆರಿಕಾಗೆ ಮಗಳ ಜತೆಗೆ ಪ್ರಯಾಣ ಬೆಳೆಸಿದ್ದರು. ಕೋವಿಡ್ನಿಂದ ಅಂತಾರಾಷ್ಟ್ರೀಯ ಫ್ಲೈಟ್ಗಳೆಲ್ಲ ರದ್ದಾಗಿರುವ ಹಿನ್ನೆಲೆಯಲ್ಲಿ ರಜನಿಕಾಂತ್ ಮಾತ್ರ ಕೇಂದ್ರ ಸರ್ಕಾರದಿಂದ ವಿಶೇಷ ಅನುಮತಿ ಪಡೆದುಕೊಂಡು, ವಿಶೇಷ ಚಾರ್ಟರ್ಡ್ ಫ್ಲೈಟ್ ಮೂಲಕ ಅಮೆರಿಕಾಗೆ ಹಾರಿದ್ದರು. ರಜನಿಕಾಂತ್ ಅವರ ಅಳಿಯ ಧನುಶ್ ಆ ಸಂದರ್ಭದಲ್ಲಿ ಹಾಲಿವುಡ್ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಅಮೆರಿಕಾದಲ್ಲಿದ್ದರು. ಹೀಗೆ ಮಗಳು-ಅಳಿಯ ಜತೆಗೆ ರಜನಿಕಾಂತ್ ಹಲವು ವೈದ್ಯರನ್ನು ಭೇಟಿ ಮಾಡುವುದರ ಜತೆಗೆ, ಚಿಕಿತ್ಸೆ ಪಡೆದು ವಾಪಸ್ಸಾಗಿದ್ದಾರೆ.
ರಜನಿಕಾಂತ್ ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ, ಅವರ ಅಭಿಮಾನಿಗಳು ಬೆಳಗಿನ ಜಾವ ಚೆನ್ನೈ ಏರ್ಪೋರ್ಟ್ನಲ್ಲಿ ತಮ್ಮ ಮೆಚ್ಚಿನ ನಟ ಬರುವಿಕೆಗಾಗಿ ಕಾಯುತ್ತಿದ್ದರು. ಸಖತ್ ಸೆಕ್ಯುರಿಟಿ ಮೂಲಕ ಆಗಮಿಸಿದ ರಜನಿಕಾಂತ್, ಅವರೆಲ್ಲರಿಗೂ ವಿಶ್ ಮಾಡಿ ಮನೆಗೆ ಹೊರಟರು.
ಅಮೆರಿಕಾಗೆ ಹೋಗುವ ಮುನ್ನ ರಜನಿಕಾಂತ್ 'ಅಣ್ಣಾತ್ತೆ' ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರವು ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ ನಾಲ್ಕರಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್, ನಯನತಾರಾ, ಕೀರ್ತಿ ಸುರೇಶ್, ಮೀನಾ, ಖುಷ್ಬೂ ಮುಂತಾದವರು ನಟಿಸಿದ್ದಾರೆ.