ಒಟ್ಟಿಗೆ ಕಾಣಿಸಿಕೊಂಡರು ಆಮೀರ್​-ಕಿರಣ್​ ... ಜತೆಗೆ ನಾಗಚೈತನ್ಯ

Lal Singh Chaddha - Nagachaitanya - Final
Published on

ಲಡಾಖ್​: 16 ವರ್ಷಗಳ ದಾಂಪತ್ಯಕ್ಕೆ ಆಮೀರ್​ ಮತ್ತು ಕಿರಣ್​ ರಾವ್​ ಇತ್ತೀಚೆಗೆ ತಿಲಾಂಜಲಿ ಹಾಡಿದ್ದು ಗೊತ್ತೇ ಇದೆ. ಅದಾಗಿ ಮರುದಿನವೇ, ಆಮೀರ್​ ಒಂದು ಹೇಳಿಕೆ ನೀಡಿದ್ದರು. ಡಿವೋರ್ಸ್​ ಪಡೆದರೂ, ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಹೇಳಿಕೊಂಡಿದ್ದರು. ಅದಕ್ಕೆ ಸರಿಯಾಗಿ, ಆಮೀರ್​ ಮತ್ತು ಕಿರಣ್​ ಇಬ್ಬರೂ ಲಡಾಖ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ, ಟಾಲಿವುಡ್​ ನಟ ನಾಗಚೈತನ್ಯ ಸಹ ಇದ್ದಾರೆ. ಇದೇನು ಕಹಾನಿ ಮೇ ಟ್ವಿಸ್ಟ್​ ಎಂದನಿಸಬಹುದು.

ಆಮೀರ್​ ಖಾನ್​ ಅಭಿನಯದ 'ಲಾಲ್​ ಸಿಂಗ್​ ಚಡ್ಡಾ' ಚಿತ್ರದಲ್ಲಿ ನಾಗಚೈತನ್ಯ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಒಂದು ತಿಂಗಳಿನಿಂದ ಇತ್ತು. ಈಗ ಚಿತ್ರದ ಚಿತ್ರೀಕರಣ ಲಡಾಖ್​ನಲ್ಲಿ ಶುರುವಾಗಿದ್ದು, ನಾಗಚೈತನ್ಯ ಆರ್ಮಿ ಆಫೀಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ. ನಾಗಚೈತನ್ಯ ಜತೆಗೆ ಆಮೀರ್​ ಸಹ ಆಫೀಸರ್​ ಪಾತ್ರದಲ್ಲಿ ನಟಿಸುತ್ತಿದ್ದು, ಮುಂದಿನ 20 ದಿನಗಳ ಕಾಲ ಅಲ್ಲೇ ಚಿತ್ರೀಕರಣ ಮುಂದುವರೆಯಲಿದೆ.

ಆಮೀರ್​ ಅವರ ಮಾಜಿ ಪತ್ನಿ ಕಿರಣ್​ ರಾವ್ ಸಹ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ಆಮೀರ್​ ಮತ್ತು ನಾಗಚೈತನ್ಯ ಜತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿದ್ದು, ಆಮೀರ್​ ಮತ್ತು ಕಿರಣ್​ ಜತೆಯಾಗಿ ಪೋಸ್​ ಕೊಟ್ಟಿರುವುದು ಹಲವರ ಹುಬ್ಬೇರಿಸಿದೆ.

ಅಂದಹಾಗೆ, 'ಲಾಲ್​ ಸಿಂಗ್​ ಚಡ್ಡಾ' ಹಾಲಿವುಡ್​ನ 'ಫಾರೆಸ್ಟ್​ ಗಂಪ್​' ಚಿತ್ರದ ರೀಮೇಕ್​ ಆಗಿದ್ದು, ಮೂಲ ಚಿತ್ರದಲ್ಲಿ ಟಾಮ್​ ಹ್ಯಾಂಕ್ಸ್​ ಮಾಡಿದ ಪಾತ್ರವನ್ನು ಆಮೀರ್​ ಖಾನ್​ ಮಾಡಿದ್ದಾರೆ. ಕರೀನಾ ಕಪೂರ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಚಿತ್ರವನ್ನು ಅದ್ವೈತ್​ ಚಂದನ್​ ನಿರ್ದೇಶಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net