

ಚೆನ್ನೈ: ರಜನಿಕಾಂತ್ ತಮ್ಮ ವಿಶಿಷ್ಟ ಮ್ಯಾನರಸಿಂ, ಮಾತಿನ ಶೈಲಿಯಿಂದ ಹೆಸರಾದವರು. ಅವರನ್ನು ಇದುವರೆಗೂ ಅನುಕರಣೆ ಮಾಡಿದವರೆಷ್ಟೋ, ಅವರ ತರಹವೇ ಸ್ಟೈಲ್ ಮಾಡುವುದಕ್ಕೆ ಹೋದವರೆಷ್ಟೋ ಗೊತ್ತಿಲ್ಲ. ಇನ್ನು, ರಜನಿಕಾಂತ್ ಕುರಿತಾಗಿ ಜೋಕ್ಗಳಿಗೆ ಬರವೇ ಇಲ್ಲ. ಆದರೆ, ಇನ್ನು ಮುಂದೆ ರಜನಿಕಾಂತ್ ಅವರ ಹೆಸರು, ಫೋಟೋ, ಧ್ವನಿ ಬಳಸುವಂತಿಲ್ಲ.
ಇದನ್ನು ಯಾರೋ ಹೇಳಿದ್ದಲ್ಲ. ಈ ಕುರಿತಾಗಿ ಸ್ವತಃ ರಜನಿಕಾಂತ್ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಇತ್ತೀಚೆಗೆ ಕೆಲವು ಬ್ರಾಂಡ್ಗಳು ರಜನಿಕಾಂತ್ ಅವರ ಅನುಮತಿ ಇಲ್ಲದೆ, ಅವರು ಹೆಸರು, ಧ್ವನಿ ಬಳಸಿಕೊಂಡು ಪ್ರಚಾರ ಮಾಡುತ್ತಿದ್ದವು. ತಮ್ಮ ಅನುಮತಿ ಇಲ್ಲದೆ ತಮ್ಮ ಹೆಸರು, ಧ್ವನಿ ಮತ್ತು ಫೋಟೋವನ್ನು ಬಳಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ರಜನಿಕಾಂತ್ ಅವರ ಲಾಯರ್ ಸುಬ್ಬಯ್ಯ ಎಳಂಬಾರತಿ ಅವರು ಒಂದು ಪ್ರಕಟಣೆ ಹೊರಡಿಸಿದ್ದಾರೆ. 'ಯಾವುದೇ ಬ್ರಾಂಡ್ ಆಗಲೀ, ರಜನಿಕಾಂತ್ ಅವರ ಅನುಮತಿ ಇಲ್ಲದೆ ಅವರ ಹೆಸರು, ಫೋಟೋ, ಧ್ವನಿ, ಮ್ಯಾನರಸಿಂ ಬಳಸಿಕೊಂಡು ಪ್ರಚಾರ ಮಾಡಬಾರದು. ತಮ್ಮ ಹೆಸರು, ವ್ಯಕ್ತಿತ್ವ, ಧ್ವನಿಯನ್ನು ಬಳಸಿಕೊಳ್ಳುವುದಕ್ಕೆ ರಜನಿಕಾಂತ್ ಅವರಿಗೆ ಮಾತ್ರ ಹಕ್ಕಿದೆ, ಬೇರೆ ಯಾರಿಗೂ ಇಲ್ಲ' ಎಂದು ಹೇಳಿದ್ದಾರೆ.
ಬರೀ ಅಷ್ಟೇ ಅಲ್ಲ, ಇನ್ನು ಮುಂದೆ ಅವರನ್ನು ಮಿಮಿಕ್ರಿ ಮಾಡುವಂತೆಯೂ ಇಲ್ಲ. ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾದರೆ, ಆಗ ಅವರಿಗೆ ಕಾನೂನು ಕ್ರಮ ಕೈಗೊಳ್ಳುವ ಸಂಪೂರ್ಣ ಹಕ್ಕಿದೆ ಎಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸಹ ತಮ್ಮ ಹೆಸರು, ಫೋಟೋ, ಧ್ವನಿಯನ್ನು ಬಳಸಿಕೊಳ್ಳಬಾರದು. ಅಂಥವರ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ಅವರು ಹೇಳಿದ್ದರು.