ಮದ್ವೆ ಮಂಟಪದಲ್ಲಿ ಹೆಲಿಕಾಪ್ಟರ್​ನಲ್ಲಿ ಸುರಿಯಿತು ಹಣದ ಮಳೆ: ನೋಟಿಗಾಗಿ ಮುಗಿಬಿದ್ದ ಸಾರ್ವಜನಿಕರು!

Money 1
Published on

ಇಸ್ಲಮಾಬಾದ್​: ಮದುವೆ ಸಮಾರಂಭದಲ್ಲಿ ಹೆಲಿಕಾಪ್ಟರ್​ ಮೂಲಕ ಹಣದ ಮಳೆ ಸುರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಮಂಡಿ ಬಹೌದ್ದೀನ್ ಏರಿಯಾದಲ್ಲಿ ಐದು ದಿನಗಳ ಹಿಂದೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

ವಿವರಣೆಗೆ ಬರುವುದಾದರೆ, ವಿದೇಶದಲ್ಲಿ ನೆಲೆಸಿರುವ ವರನ ಸಹೋದರ, ಮದುವೆ ಸಂಭ್ರಮಕ್ಕೆಂದೇ ಹೆಲಿಕಾಪ್ಟರ್​ ಬಾಡಿಗೆ ಪಡೆದು ಅಣ್ಣನ ಮದುವೆಯಲ್ಲಿ ಹೂವಿನ ಜತೆಗೆ ನೋಟಿನ ಮಳೆಯನ್ನು ವಧು-ವರ ಸೇರಿದಂತೆ ಅತಿಥಿಗಳ ಮೇಲೆ ಸುರಿಸಿದ್ದಾರೆ. ಮದುವೆಗೆ ಬಂದ ಜನರು ಹಾಗೂ ಸಾರ್ವಜನಿಕರು ನೋಟಿಗಾಗಿ ವಾಹನದ ಮೇಲೆಲ್ಲಾ ಏರಿ ಹಣ ಸಂಗ್ರಹಿಸಿದ ಪ್ರಸಂಗ ಹಾಸ್ಯಾಸ್ಪದವಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇಂತಹ ಘಟನೆ ಪಾಕಿಸ್ತಾನದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಗುಜ್ರಾನ್​ವಾಲದ ಉದ್ಯಮಿಯೊಬ್ಬರು ತಮ್ಮ ಮಗನ ಮದುವೆಗೆ ಡಾಲರ್​ ಮಳೆ ಸುರಿದಿದ್ದರು. ಮದುವೆ ಮಂಟಪದ ಪಕ್ಕದಲ್ಲಿದ್ದ ಕಟ್ಟಡವೊಂದನ್ನು ಏರಿದ ಉದ್ಯಮಿ ಕುಟುಂಬದವರು ರಾಶಿ ರಾಶಿ ನೋಟನ್ನು ಸುರಿದಿದ್ದರು. ಈ ವಿಡಿಯೋ ಸಹ ವೈರಲ್​ ಆಗಿತ್ತು.

ಇನ್ನು ಪಾಕಿಸ್ತಾನ ಬಡತನದ ವಿರುದ್ಧ ಹೋರಾಡುತ್ತಿರುವುದು ಇದೇ ಮೊದಲೇನಲ್ಲ. ಪಾಕಿಸ್ತಾನ ಬಿಕಾರಿಯಾದ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ತುಂಬಾ ಸಾಲದ ಹೊರೆ ಹೊಂದಿರುವಂತಹ ದೇಶದಲ್ಲಿ ಈ ರೀತಿ ಮದುವೆ ನಡೆದಿರುವುದು ಎಲ್ಲರ ಹುಬ್ಬೇರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net