ರಾಜ್ಯದಲ್ಲಿ ಇನ್ನೂ 2 ದಿನ ಮಳೆ; ನಾಳೆ 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

rain
Published on

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷೆಯಂತೆ ಉತ್ತಮವಾಗಿ ಪೂರ್ವ ಮುಂಗಾರು ಮಳೆ ಸುರಿಯುತ್ತಿದೆ. ರಾಜ್ಯಾದ್ಯಂತ ಏ.12ರಿಂದ ಏ.18ರವರೆಗೆ ವಾಡಿಕೆಯಂತೆ 9 ಮಿಮೀ ಮಳೆ ಬದಲಾಗಿ 21 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.133 ಹೆಚ್ಚು ಮಳೆ ಬಿದ್ದಿದೆ.

ದಕ್ಷಿಣ ಒಳನಾಡಿನಲ್ಲಿ 11 ಮಿಮೀ ಮಳೆಯಾಗಬೇಕಿತ್ತು, ಆದರೆ, 32 ಮಿಮೀ ಮಳೆಯಾಗಿದ್ದು, ಶೇ.186 ಹೆಚ್ಚುವರಿ ಸುರಿದಿದೆ. ಉತ್ತರ ಒಳನಾಡಿನಲ್ಲಿ 7 ಜಿಲ್ಲೆಗಳಲ್ಲಿ ಮಳೆ ಕೊರತೆಯಾದರೂ ವಾಡಿಕೆಯಂತೆ 7 ಮಿಮೀ ಮಳೆ ಬದಲಾಗಿ 10 ಮಿಮೀ ಮಳೆಯಾಗಿದ್ದು, ಶೇ.40 ಹೆಚ್ಚುವರಿ ಮಳೆ ಸುರಿದಿದೆ.

ಅದೇರೀತಿ, ಮಲೆನಾಡಿನಲ್ಲಿ 13 ಮಿಮೀ ಮಳೆಯಾಗಬೇಕಿತ್ತು. ಆದರೆ, 34 ಮಿಮೀ ಮಳೆ ಸುರಿದಿದ್ದು, ಶೇ.162 ಹೆಚ್ಚುವರಿ ಸುರಿದಿದೆ. ಕರಾವಳಿಯಲ್ಲಿ 8 ಮಿಮೀ ಮಳೆ ಬದಲಾಗಿ 24 ಮಿಮೀ ಮಳೆಯಾಗಿದ್ದು, ಶೇ.221 ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಒಂದು ವಾರದಲ್ಲಿ ರಾಜ್ಯದ ಇತರೆ ಜಿಲ್ಲೆಗಳಗಿಂತ ಉಡುಪಿ, ಕೋಲಾರ ಮತ್ತು ಬೆಂಗಳೂರಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಇನ್ನೂ 2 ದಿನ ಮಳೆ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 2 ದಿನ ಮುಂದುವರಿಯಲಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಏ.19,20ರಂದು, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಮುಂದಿನ 24 ಗಂಟೆ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net