ಕುರ್​ಕುರೆ ಥರದ ಪ್ಯಾಕೆಟ್​ನಲ್ಲಿ 500 ರೂ. ಗರಿ ಗರಿ ನೋಟು! ಖರೀದಿಗೆ ಮುಗಿಬಿದ್ದ ರಾಯಚೂರು ಜನ

Kurkure
Published on

ರಾಯಚೂರು: ಚಿಪ್ಸ್​ ಅಥವಾ ಕುರ್​ಕುರೆ ರೀತಿಯ ಪ್ಯಾಕೆಟ್​ ಒಳಗೆ ಒಂದೊಂದು ಚಾಕೊಲೇಟ್​ ಅಥವಾ ಕೈಗೆ ಅಂಟಿಸಿಕೊಳ್ಳುವ ಸ್ಟಿಕರ್ಸ್​ ಸಿಗುವುದನ್ನು ನಾವು ನೋಡಿದ್ದೇವೆ. ಆದರೆ, ಅದೇ ಕುರ್​ಕುರೆ ಥರದ ಪ್ಯಾಕೆಟ್​ನಲ್ಲಿ 500 ರೂಪಾಯಿಯ ಗರಿ ಗರಿ ನೋಟು ಸಿಗುತ್ತದೆ ಅಂದರೆ ನೀವು ನಂಬುತ್ತೀರಾ? ನಂಬಲು ಅಸಾಧ್ಯವಾದರೂ ಇದು ಸತ್ಯವಾಗಿದೆ.

ಹೌದು, ಕುರ್​​​ಕುರೆ ಥರದ ಪ್ಯಾಕೆಟ್​​​ ಖರೀದಿ ಮಾಡಿ ಸುಮಾರು 20 ಸಾವಿರಕ್ಕೂ ಹೆಚ್ಚು ಹಣವನ್ನು ರಾಯಚೂರು ಜಿಲ್ಲೆಯ ಜನ ಪಡೆದಿದ್ದಾರೆ. ಜಿಲ್ಲೆಯ ಲಿಂಗಸಗೂರು ತಾಲೂಕಿನ ಹನೂರು ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಕುರ್​ಕುರೆ ರೀತಿಯ ಪ್ಯಾಕೆಟ್​ ತೆಗೆದುಕೊಳ್ಳಲು ಇದೀಗ ಜನ ಮುಗಿಬಿದ್ದಿದ್ದಾರೆ.

ಕುರ್​ಕುರೆ ಥರದ ಪ್ಯಾಕೆಟ್​ನಲ್ಲಿ ಹಣ ಬರುವುದನ್ನು ಖಚಿತಪಡಿಸಿಕೊಂಡು ಜನರು ಖರೀದಿಗೆ ಮುಗಿ ಬಿದ್ದಿದ್ದಾರೆ. 5 ರೂಪಾಯಿ ಪ್ಯಾಕೆಟ್​ನಲ್ಲಿ 500 ರೂ. ಬಂದಿದ್ದನ್ನು ಕಂಡು ಜನ ಸಂತಸಗೊಂಡಿದ್ದಾರೆ. ಫ್ಲಿಂಗ್ಸ್​ ಪಂಜಾಬ್​ ತಡ್ಕಾ (Flings Punjab Tadka) ಹೆಸರಿನ ಬ್ರಾಂಡ್​ನ ಪ್ಯಾಕೆಟ್​ನಲ್ಲಿ ಹಣ ಪತ್ತೆಯಾಗಿದೆ.

ಬಹುಶಃ ತಮ್ಮ ಉತ್ಪನ್ನದ ಜಾಹಿರಾತು ಹಾಗೂ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಕಂಪನಿಯೇ ಪ್ಯಾಕೆಟ್​ನಲ್ಲಿ ಹಣವಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಖಚಿತ ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ. ತನಿಖೆಯ ಬಳಿಕವಷ್ಟೇ ಈ ಬಗ್ಗೆ ಖಚಿತ ಮಾಹಿತಿ ತಿಳಿಯಲಿದೆ. ಸದ್ಯ ಕುರ್​ಕುರೆ ಥರದ ಪ್ಯಾಕೆಟ್​ ತೆಗೆದುಕೊಳ್ಳಲು ಜನರು ಮಾತ್ರ ಮುಗಿಬಿದ್ದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net