ಹೊಸಪೇಟೆ ವಿದ್ಯಾರ್ಥಿಗಳ ಕೈಯಲ್ಲಿ ಯುರೇಶಿನ್​ ಗ್ರಿಫನ್​ ವಲ್ಚರ್​! ಎಲ್ಲಿ ಸಿಕ್ತು ಅಂತಾ ಕೇಳಿದ್ರೆ ಬಂದಿದ್ದು ಅಚ್ಚರಿ ಉತ್ತರ

Eurasian griffon vulture
Published on

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯ ರಾಣಿಪೇಟೆಯಲ್ಲಿ ಶಾಲಾ ವಿದ್ಯಾರ್ಥಿಗಳ ಕೈಯಲ್ಲಿದ್ದ ಯುರೇಶಿನ್​ ಗ್ರಿಫನ್​ ವಲ್ಚರ್​ ಪಕ್ಷಿ ಅಚ್ಚರಿ ಮೂಡಿಸಿದೆ. ಈ ಪಕ್ಷಿ ನಿಮಗೆ ಎಲ್ಲಿ ಸಿಕ್ತು ಎಂದು ಕೇಳಿದರೆ ಮಕ್ಕಳು ಆಕಾಶದಿಂದ ಬಿತ್ತು ಎಂದಿದ್ದಾರೆ.

ಇದು ಒಮ್ಮೊಮ್ಮೆ ಅಸ್ವಸ್ಥಗೊಂಡು ಬಿದ್ದಿರುವ ಸಾಧ್ಯತೆ ಇರಬಹುದದೆಂದು ಪಕ್ಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಯಿತು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿ ವಿನಯ್‌ ಅವರು ಪಕ್ಷಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ, ಅಟಲ್‌ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಾಹಲಯಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡ್ಯೂಯ್ದರು.

ಭಾರತದ ಉತ್ತರ ಭಾಗ ಹಾಗೂ ವಾಯುವ್ಯ ಭಾರತದಲ್ಲಿ ಈ ರಣಹದ್ದುಗಳು ಕಂಡು ಬರುತ್ತವೆ. ಅಲ್ಲದೆ, ರಾಮನಗರದ ಸುತ್ತಮುತ್ತಲೂ ಈ ರಣಹದ್ದುಗಳು ಕಾಣಸಿಗುತ್ತವೆ. ಚಳಿಗಾಲ ಹಿನ್ನೆಲೆಯಲ್ಲಿ ವಲಸೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಯುರೇಶಿಯನ್ ಗ್ರಿಫನ್ ರಣಹದ್ದು, ಬೇಟೆಯ ಕುಟುಂಬ ಆಕ್ಸಿಪಿಟ್ರಿಡೆಯಲ್ಲಿನ ದೊಡ್ಡ ಓಲ್ಡ್ ವರ್ಲ್ಡ್ ರಣಹದ್ದಾಗಿದೆ. ಇದನ್ನು ಗ್ರಿಫನ್ ರಣಹದ್ದು ಎಂದೂ ಕರೆಯಬಹುದು. ಈ ಗ್ರಿಫನ್ ರಣಹದ್ದು 93 ರಿಂದ 122 ಸೆ.ಮೀ (37 ರಿಂದ 48 ಇಂಚು) ಉದ್ದವಿದೆ. ಇದು 2.3 ರಿಂದ 2.8 ಮೀಟರ್​ (7.5 ರಿಂದ 9.2 ಅಡಿ) ಉದ್ದದ ರೆಕ್ಕೆಗಳನ್ನು ಹೊಂದಿದೆ. ಗಂಡು ಹಕ್ಕಿಯು 6.2 ರಿಂದ 10.5 ಕೆಜಿ ತೂಕವಿರುತ್ತದೆ ಮತ್ತು ಹೆಣ್ಣು ಹಕ್ಕಿ ಸಾಮಾನ್ಯವಾಗಿ 6.5 ರಿಂದ 10.5 ಕೆಜಿ ತೂಗುತ್ತವೆ. ಆದರೆ ಭಾರತೀಯ ಉಪಜಾತಿಗಳಲ್ಲಿ ರಣಹದ್ದುಗಳು ಸರಾಸರಿ 7.1 ಕೆ.ಜಿ. ತೂಕವಿರುತ್ತವೆ. ವಯಸ್ಕ ಹಕ್ಕಿಯ ತೂಕವು 4.5 ರಿಂದ 15 ಕೆಜಿ ವರೆಗೆ ಇರಲಿದೆ.

ಇಟಲಿಯ ಸಾರ್ಡಿನಿಯಾ ದ್ವೀಪದಲ್ಲಿ ಮಾತ್ರ ಈ ಜಾತಿಯ ರಣಹದ್ದುಗಳು ಕಂಡು ಬರುತ್ತವೆ. ಆದರೆ ಪರ್ಯಾಯ ದ್ವೀಪಗಳಲ್ಲಿಯೂ ಇದನ್ನು ಮರುಪರಿಚಯಿಸುವ ಪ್ರಯತ್ನಗಳನ್ನು ಇತ್ತೀಚೆಗೆ ಮಾಡಲಾಗುತ್ತಿದೆ. ಇತ್ತೀಚೆಗೆ ಇದರ ಜನಸಂಖ್ಯೆಯಲ್ಲೂ ಭಾರಿ ಹೆಚ್ಚಳ ಕಂಡಿದ್ದು, ನೆರೆಹೊರೆಯ ದೇಶಗಳಿಗೂ ಇದನ್ನು ಮರುಪರಿಚಯಿಸುವ ಯೋಜನೆಗಳು ಜಾರಿಗೆ ಬರುತ್ತಿವೆ. ಈ ಪಕ್ಷಿಯನ್ನು ಬೇಟೆಯಾಡುವುದನ್ನು ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net