ದತ್ತಪೀಠದ ದಾರಿಯಲ್ಲಿ ಮೊಳೆ ಹಾಕಿದ್ದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ಹಲವರು ಭಾಗಿಯಾಗಿರೋ ಶಂಕೆ

Nails
Published on

ಚಿಕ್ಕಮಗಳೂರು: ದತ್ತಜಯಂತಿ ಸಂದರ್ಭದಲ್ಲಿ ದತ್ತಪೀಠಕ್ಕೆ ಭಕ್ತರು ತೆರಳುವ ದಾರಿಯಲ್ಲಿ ಮೊಳೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಮೊಹಮ್ಮದ್​ ಶಾಹಬಾಸ್​ ಮತ್ತು ವಾಹೀದ್​ ಹುಸೇನ್​ ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರಿನ ದುಬೈ ನಗರದ ನಿವಾಸಿಗಳು. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.

ಡಿಸೆಂಬರ್ 6ರಂದು ದತ್ತಜಯಂತಿ ಹಿನ್ನೆಲೆ ಅನುಸೂಯ ಜಯಂತಿ ನಡೆಯುವಾಗ ಈ ಪ್ರಕರಣ ನಡೆದಿತ್ತು. ದತ್ತ ಪೀಠಕ್ಕೆ ಬರುವ ಭಕ್ತಾದಿಗಳ ವಾಹನಗಳನ್ನು ಪಂಚರ್​ ಮಾಡುವ ದುರುದ್ದೇಶದಿಂದ ಗಿರಿಸಾಲಿನ ರಸ್ತೆಗಳ ತಿರುವುಗಳಲ್ಲಿ ಮೊಳೆಗಳನ್ನು ಸುರಿಯಲಾಗಿತ್ತು.

ಬಾಂಬ್ ಸ್ಕ್ವಾಡ್, ಪೊಲೀಸರು ಹಾಗೂ ಭಜರಂಗದಳದ ಕಾರ್ಯಕರ್ತರು ಮೊಳೆ ತೆರವುಗೊಳಿಸಿದ್ದರು. ಎಡಿಜಿಪಿ ಅಲೋಕ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆಗೆ ಸೂಚನೆ ನೀಡಿದ್ದರು. ಇದೀಗ ಇಬ್ಬರನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net