

ಚಿಕ್ಕಮಗಳೂರು: ಹೊಸ ಬೋರ್ವೆಲ್ ಕೊರೆಯುವಾಗ ಹಳೆಯ ಬೋರ್ವೆಲ್ನಲ್ಲಿ ಮುಗಿಲೆತ್ತರಕ್ಕೆ ನೀರು ಚಿಮ್ಮಿದ ಅಚ್ಚರಿಯ ಘಟನೆ ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದ್ದು, ಈ ಅಪರೂಪದ ಕ್ಷಣವನ್ನು ಸಾಕಷ್ಟು ಜನರು ಕಣ್ತುಂಬಿಕೊಂಡಿದ್ದಾರೆ.
ಬೋರ್ವೆಲ್ ಕೊರೆಯುವ ಲಾರಿಗಿಂತ ಹೆಚ್ಚು ಎತ್ತರಕ್ಕೆ ನೀರು ಚಿಮ್ಮಿದೆ. ಚಿಕ್ಕದೇವನೂರು ಗ್ರಾಮದ ನಿವಾಸಿ ಶೇಖರಪ್ಪ ಎಂಬುವರ ತೋಟದಲ್ಲಿ ಈ ಅಪರೂಪದ ವಿದ್ಯಾಮಾನ ಜರುಗಿದೆ.
ಹೊಸ ಬೋರ್ವೆಲ್ನಲ್ಲಿ 50 ಅಡಿಗೆ ನೀರು ಸಿಕ್ಕರೆ, ಹಳೆಯ ಬೋರ್ವೆಲ್ನಲ್ಲಿ ಮುಗಿಲೆತ್ತರಕ್ಕೆ ನೀರು ಹಾರಿದೆ. ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿದ ಬೋರ್ವೆಲ್ನಿಂದ ಅಂತರ್ಜಲ ಚಿಮ್ಮಿದ್ದು, ಹಳೆ ಬೋರ್ವೆಲ್ ಕೇಸಿಂಗ್ ಪೈಪ್ ಬಂದ್ ಮಾಡಿ ಹೊಸ ಬೋರ್ವೆಲ್ ಕೊರೆದಿದ್ದಾರೆ.
ಇದೀಗ ಬತ್ತಿದ್ದ ಬೋರ್ವೆಲ್ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರನ್ನು ನೋಡಲೆಂದೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ಆಗಮಿಸಿದರು. ನೀರು ಚಿಮ್ಮುವ ರೀತಿಯನ್ನು ನೋಡಿ ಹುಬ್ಬೇರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ. ಅಂದಹಾಗೆ ಕಳೆದ ಎರಡು ವರ್ಷಗಳಿಂದ ಬರದ ತವರು ಕಡೂರಲ್ಲಿ ಸಮೃದ್ಧ ಮಳೆಯಾಗಿದೆ. (ದಿಗ್ವಿಜಯ ನ್ಯೂಸ್)