ತರಕಾರಿ ಅಂಗಡಿಗೆ ರಾಹುಲ್​ ಗಾಂಧಿ ಭೇಟಿ; ಗೃಹಿಣಿಯರ ಜತೆಗಿನ ಸಂವಾದದ ವಿಡಿಯೋ ಹಂಚಿಕೊಂಡ ಕಾಂಗ್ರೆಸ್​ ನಾಯಕ | Rahul Gandhi

Untitled design (4)
Published on

ನವದೆಹಲಿ: ಬೆಲೆ ಏರಿಕೆಯಿಂದ ಜನತೆ ಸಂಕಷ್ಟದಲ್ಲಿದ್ದು ಸರ್ಕಾರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿರುವಾಗ ದಿನನಿತ್ಯದ ಅಗತ್ಯದ ಸಣ್ಣಪುಟ್ಟ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ( Rahul Gandhi) ಮಂಗಳವಾರ(ಡಿಸೆಂಬರ್​ 24) ಹೇಳಿದ್ದಾರೆ.

ರಾಷ್ಟ್ರರಾಜಧಾನಿಯಲ್ಲಿರುವ ಗಿರಿನಗರ ತರಕಾರಿ ಮಾರುಕಟ್ಟೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಭದ್ರತಾ ಭೇಟಿ ನೀಡಿದ್ದರು. ಭದ್ರತಾ ವ್ಯವಸ್ಥೆಗಳ ನಡುವೆ ಅವರು ಸಾಮಾನ್ಯ ಜನರು ಮತ್ತು ತರಕಾರಿ ಮಾರಾಟಗಾರರಿಂದ ತರಕಾರಿಗಳ ಬೆಲೆಯನ್ನು ಕೇಳಿದರು. ಅನೇಕ ಮಹಿಳೆಯರು ಮತ್ತು ಪುರುಷರು ತಮ್ಮೊಂದಿಗೆ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಮಧ್ಯೆ ಬೆಳ್ಳುಳ್ಳಿ ಹೇಗಿದೆ ಎಂದು ತರಕಾರಿ ಮಾರಾಟಗಾರನನ್ನು ಕೇಳಿದರು. ಆತ ಕೆ.ಜಿ.ಗೆ 400 ರೂಪಾಯಿ ಎಂದು ಉತ್ತರಿಸಿದ. ಅಲ್ಲಿದ್ದ ಮಹಿಳೆಯೊಬ್ಬರು ಚಿನ್ನ ಅಗ್ಗವಾಯಿತು ಆದರೆ ಬೆಳ್ಳುಳ್ಳಿ ಕಡಿಮೆ ಆಗಲಿಲ್ಲ ಎಂದು ಹೇಳಿದರು.

ಸುಮಾರು 6 ನಿಮಿಷಗಳ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್​​ ನಾಯಕ ರಾಹುಲ್​ಗಾಂಧಿ, ಒಂದು ಕಾಲದಲ್ಲಿ 40 ರೂಪಾಯಿ ಇದ್ದ ಬೆಳ್ಳುಳ್ಳಿ ಇಂದು 400 ರೂಪಾಯಿ ಆಗಿದೆ. ಏರುತ್ತಿರುವ ಹಣದುಬ್ಬರವು ಜನಸಾಮಾನ್ಯರ ಅಡುಗೆ ಬಜೆಟ್ ಅನ್ನು ಹಾಳು ಮಾಡಿದೆ. ಸರ್ಕಾರವು ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅಲ್ಲಿ ನೆರೆದಿದ್ದ ಗಿರಿನಗರದ ಮಹಿಳೆಯರನ್ನು ತಮ್ಮ ಮನೆಗೆ ಚಹಾ ಕುಡಿಯಲು ಆಹ್ವಾನಿಸಿದರು. ಮನೆಗೆ ತಲುಪಿದ ನಂತರ ರಾಹುಲ್ ಅಲ್ಲಿ ನೆರೆದಿದ್ದ ಮಹಿಳೆಯರನ್ನು, ಹಣದುಬ್ಬರ ಹೆಚ್ಚುತ್ತಿದೆ, ಇದರಿಂದ ನೀವು ಒತ್ತಡವನ್ನು ಅನುಭವಿಸುತ್ತೀರಾ? ಎಂದು ಕೇಳಿದರು. ಅದಕ್ಕೆ ಮಹಿಳೆಯರು ಹೌದು ಒತ್ತಡ ಹೆಚ್ಚಿದೆ ಎಂದು ತಿಳಿಸಿದರು. ಮಾರುಕಟ್ಟೆಯಲ್ಲಿ ಮಹಿಳೆಯರು ರಾಹುಲ್​ಗಾಂಧಿ ಅವರ ಬಳಿ ತಮ್ಮ ಕಷ್ಟಗಳನ್ನ ತಿಳಿಸಿದ್ದಾರೆ. 2-3 ವರ್ಷಗಳಿಂದ ಸಂಬಳ ಒಂದೇ ಇದೆ. ಆದರೆ ದಿನನಿತ್ಯದ ವಸ್ತುಗಳ ಬೆಲೆ ಮಾತ್ರ ಏರುತ್ತಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net