

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೀಸಲಾತಿ ಮರುಪರಿಶೀಲನೆಗೆ ಒತ್ತಾಯಿಸಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಶ್ರೀನಗರದ ಲೋಕಸಭಾ ಸದಸ್ಯ ಸೈಯದ್ ರುಹುಲ್ಲಾ ಮೆಹದಿ ಸೋಮವಾರ(ಡಿಸೆಂಬರ್ 23) ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ(CM Omar Abdullah)ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ನಡೆಸುವುದಾಗಿ ಮೆಹದಿ ಭಾನುವಾರ(ಡಿಸೆಂಬರ್ 22) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಾರಿಗೆ ತಂದ ಪ್ರಸ್ತುತ ಮೀಸಲಾತಿ ನೀತಿಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವುದಾಗಿ ಹೇಳಿದ್ದರು.
ಕೇಂದ್ರ ಸರ್ಕಾರವು ಪಹಾರಿ ಮಾತನಾಡುವ ಜನರಿಗೆ ಮೀಸಲಾತಿ ನೀಡಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ ಅರ್ಹತೆಯ ವರ್ಗವನ್ನು ಕೇವಲ 30 ಪ್ರತಿಶತಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ವಿವಿಧ ಸಮುದಾಯಗಳಿಗೆ 70 ಪ್ರತಿಶತ ಸೀಟುಗಳನ್ನು ಮೀಸಲಿಡಲಾಗಿದೆ. ವಿದ್ಯಾರ್ಥಿಗಳು, ವಿಶೇಷವಾಗಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ತರಬೇತಿ ಪಡೆಯುತ್ತಿರುವವರು ಈ ನೀತಿಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಇದು ಅರ್ಹತೆಯನ್ನು ಕಡೆಗಣಿಸುತ್ತದೆ ಮತ್ತು ಅರ್ಹತೆ ಅತ್ಯುನ್ನತವಾಗಿರಬೇಕಾದಲ್ಲಿ ಸಾಧಾರಣತೆಯನ್ನು ಉತ್ತೇಜಿಸುತ್ತದೆ ಎಂಬುದು ಅವರ ಆರೋಪವಾಗಿದೆ.
ಮಾರ್ಚ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಆಡಳಿತವು 2005ರ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ನಿಯಮಗಳನ್ನು ತಿದ್ದುಪಡಿ ಮಾಡಿತು. ಪರಿಚಯಿಸಿದ ಹೊಸ ನೀತಿಯು ಸಾಮಾನ್ಯ ವರ್ಗದ ಮೀಸಲಾತಿ ಶೇಕಡಾವನ್ನು ಕಡಿಮೆ ಮಾಡಿತು. ಉದ್ಯೋಗಗಳು ಮತ್ತು ಪ್ರವೇಶಗಳಲ್ಲಿ ಮೀಸಲಾತಿ ವರ್ಗಗಳಿಗೆ ಹೆಚ್ಚಿಸಿತು. ಆಗಿನ ಆಡಳಿತವು ಪಹಾರಿಗಳು ಮತ್ತು ಇತರ ಮೂರು ಬುಡಕಟ್ಟುಗಳಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ಅನುಮೋದಿಸಿತು. ಪರಿಶಿಷ್ಟ ಪಂಗಡ (ST) ವರ್ಗದ ಅಡಿಯಲ್ಲಿ ಒಟ್ಟು ಮೀಸಲಾತಿಗಳನ್ನು 20 ಪ್ರತಿಶತದವರೆಗೆ ತೆಗೆದುಕೊಂಡಿತು.
ಜಮ್ಮು-ಕಾಶ್ಮೀರ ಚುನಾವಣೆಯ ಸಮಯದಲ್ಲಿ ಮೀಸಲಾತಿ ನೀತಿಯ ವಿಷಯ ವೇಗ ಪಡೆದುಕೊಂಡಿತ್ತು ಎಂಬುದು ಗಮನಾರ್ಹ. ಈ ವಿಷಯ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಅವರ ಪಕ್ಷದ ನಾಯಕ ನಡೆಸುತ್ತಿರುವ ಪ್ರತಿಭಟನೆ ಇದೀಗ ಒಮರ್ ಅಬ್ದುಲ್ಲಾ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಕಳೆದ ನವೆಂಬರ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಘಾ ರುಹುಲ್ಲಾ ಅವರು ಒಮರ್ ಅಬ್ದುಲ್ಲಾ ಸರ್ಕಾರಕ್ಕೆ ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿದ್ದರು ಮತ್ತು ನಾನು ಮುಖ್ಯಮಂತ್ರಿಯೊಂದಿಗೆ ಎರಡು ಬಾರಿ ಮಾತನಾಡಿದ್ದೇನೆ ಎಂದು ಹೇಳಿದ್ದರು.(ಏಜೆನ್ಸೀಸ್)