

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಮತ್ತೊಮ್ಮೆ ಟ್ವಿಟ್ಟರ್ನಲ್ಲಿ ಭಾರೀ ಸುದ್ದಿ ಮಾಡಲಾರಂಭಿಸಿದ್ದಾರೆ. ಒಂದೇ ದಿನ ರಾಹುಲ್ ಗಾಂಧಿ ಸುಮಾರು 50 ಮಂದಿಯನ್ನು ಟ್ವಿಟ್ಟರ್ನಲ್ಲಿ ಅನ್ಫಾಲೋ ಮಾಡಿದ್ದು, ಇದರ ಕುರಿತಾಗಿ ಚರ್ಚೆ ಆರಂಭವಾಗಿದೆ.
ಮಂಗಳವಾರದಂದು ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯಿಂದ ತಮ್ಮದೇ ಪಕ್ಷದ ಕೆಲ ನಾಯಕರು, ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳು, ಪತ್ರಕರ್ತರೂ ಸೇರಿ ಒಟ್ಟು ದುಮಾರು 50 ಮಂದಿಯನ್ನು ಅನ್ಫಾಲೋ ಮಾಡಲಾಗಿದೆ. ವಿಶೇಷವೆಂದರೆ ಅವರದೇ ಕ್ಷೇತ್ರವಾದ ವಯ್ನಾಡಿನ ಸಂಸದರ ಕಚೇರಿಯಲ್ಲಿ ಕೆಲಸ ಮಾಡುವ ಕೆಲ ಅಧಿಕಾರಿಗಳ ಖಾತೆಯನ್ನೂ ರಾಹುಲ್ ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ. 18.8 ಮಿಲಿಯನ್ ಫಾಲೋವರ್ಸ್ ಹೊಂದಿರುವ ರಾಹುಲ್ ಅವರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. ಇದೀಗ ರಾಹುಲ್ 220 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.
ರಾಹುಲ್ ಅವರ ಈ ನಡೆಗೆ ಕಾಂಗ್ರೆಸ್ ಸ್ಪಷ್ಟನೆ ನೀಡುವ ಪ್ರಯತ್ನವನ್ನೂ ಮಾಡಿದೆ. ಇದೀಗ ಅವರು ಫಾಲೋ ಮಾಡಬೇಕಾಗಿರುವ ಜನರ ಹೊಸ ಪಟ್ಟಿ ಸಿದ್ಧವಾಗುತ್ತಿದೆ. ಅದಾದ ನಂತರ ಅವರನ್ನು ಫಾಲೋ ಲಿಸ್ಟ್ಗೆ ಸೇರಿಸಲಾಗುವುದು. ಈಗ ಅನ್ಫಾಲೋ ಆಗಿರುವ ಕೆಲವರೂ ಆ ಪಟ್ಟಿಯಲ್ಲಿ ಮತ್ತೆ ಸೇರಿಕೊಳ್ಳಬಹುದು ಎಂದು ತಿಳಿಸಿದೆ. ಅದಾಗ್ಯೂ ಈ ಬಗ್ಗೆ ಅನೇಕರು ಅನೇಕ ಮಾತುಗಳನ್ನು ಆಡಿಕೊಳ್ಳುವುದು ಮಾತ್ರ ನಿಲ್ಲಿಸಿಲ್ಲ. (ಏಜೆನ್ಸೀಸ್)