ಮೊದಲು ಎಲ್ಲರಿಗೂ ಲಸಿಕೆ ಕೊಡಿ, ಆಮೇಲೆ ಮನ್ ಕೀ ಬಾತ್ ಮಾಡಬಹುದು: ರಾಹುಲ್ ಗಾಂಧಿ

rahul
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರದಂದು ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಆದರೆ ಅದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೊದಲು ಎಲ್ಲರಿಗೂ ಲಸಿಕೆ ಕೊಟ್ಟು ಆಮೇಲೆ ಮನ್​ ಕೀ ಬಾತ್ ಮಾಡಿ ಎಂದು ಟಾಂಟ್​ ಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, "ಮೊದಲು ಈ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಕರೊನಾ ಲಸಿಕೆ ತಲುಪುವಂತೆ ಮಾಡಿ. ಆಮೇಲೆ ನಿಮ್ಮ ಮನಸ್ಸು ಬಯಸಿದರೆ ಮನ್​ ಕೀ ಬಾತ್ ನಡೆಸಿ" ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಅದರ ಜತೆ ಕರೊನಾ ಲಸಿಕೆ ಬಗೆಗಿನ ಸತ್ಯಗಳು ಎಂಬ ಚಾರ್ಟ್​ ಒಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಪ್ರತಿ ನಿಲುವಿಗೂ ಪ್ರತಿಕ್ರಿಯೆಗಳನ್ನು ಕೊಡುತ್ತಲೇ ಬಂದಿರುವ ರಾಹುಲ್ ಗಾಂಧಿ ಅವರು, ಕರೊನಾ ನಿಯಂತ್ರಣದಲ್ಲಿ ಕೇಂದ್ರ ಎಡವಿದೆ ಎಂದು ಸಾಕಷ್ಟು ಬಾರಿ ಹೇಳಿದ್ದರು. ಟ್ವಿಟ್ಟರ್​ನಲ್ಲಿ ಆ್ಯಕ್ಟಿವ್ ಇರುವ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಸದಾ ಹೇಳಿಕೆ ನೀಡುತ್ತಲೇ ಇರುತ್ತಾರೆ.

ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​ನ 78ನೇ ಆವೃತ್ತಿಯಲ್ಲಿ ಇಂದು ಮಾತನಾಡಿದ ಮೋದಿ, “ನಿಮಗೆಲ್ಲಾ ಕೇಳಿಕೊಳ್ಳುತ್ತೇನೆ – ವಿಜ್ಞಾನವನ್ನು ನಂಬಿರಿ. ನಮ್ಮ ವಿಜ್ಞಾನಿಗಳನ್ನು ನಂಬಿರಿ. ಇಡೀ ದೇಶದಲ್ಲಿ 31 ಕೋಟಿಗೂ ಹೆಚ್ಚು ಜನರು ಲಸಿಕೆ ತೆಗೆದುಕೊಂಡಿದ್ದಾರೆ. ಲಸಿಕೆಗೆ ಸಂಬಂಧಿಸಿದ ನಕಾರಾತ್ಮಕ ವದಂತಿಗಳನ್ನು ನಾವು ಎಂದಿಗೂ ನಂಬಬಾರದು” ಎಂದು ಮನವಿ ಮಾಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net