

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಚೀನಾದ ಕಮ್ಯುನಿಸ್ಟ್ ಪಾರ್ಟಿ ಜತೆ 2008ರಲ್ಲಿ ಗುಟ್ಟಾಗಿ ಮಾಡಿಕೊಂಡಿರುವ ಒಪ್ಪಂದದ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್‌ಐಎ) ಆದೇಶಿಸುವಂತೆ ಕೋರಿ ವಕೀಲರೊಬ್ಬರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967ರ ಅಡಿಯಲ್ಲಿ ಒಪ್ಪಂದದ ಬಗ್ಗೆ ತನಿಖೆ ನಡೆಸಲು ಎನ್ಐಎಗೆ ಆದೇಶಿಸುವಂತೆ ಕೋರಲಾಗಿದೆ.
ಏನಿದು ಒಪ್ಪಂದದ ಆರೋಪ?
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರ ವಿರುದ್ಧ ಇರುವ ಆರೋಪಗಳೆಂದರೆ: 2008ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿ ಇದ್ದ ವೇಳೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಚೀನಾದ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಉಭಯ ಪಕ್ಷಗಳು ಉನ್ನತ ಮಟ್ಟದ ವಿನಿಮಯ ನಡೆಸಲು ಹಾಗೂ ಪ್ರಮುಖ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಪರಸ್ಪರ ಸಮಾಲೋಚನೆ ನಡೆಸುವ ತಿಳಿವಳಿಕೆ ಒಪ್ಪಂದಕ್ಕೆ ಆಗ ಸಹಿ ಹಾಕಿದ್ದವು. ಆಗ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಹಾಗೂ ಈಗಿನ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸಹಿ ಹಾಕಿದ್ದರು.
ಇಷ್ಟೇ ಅಲ್ಲದೇ, ಮೊದಲಿಗೆ ಚೀನಾದ ಕಮ್ಯುನಿಸ್ಟ್ ಪಕ್ಷದ ಜತೆ ಕಾಂಗ್ರೆಸ್ ಒಪ್ಪಂದಕ್ಕೆ ಸಹಿ ಹಾಕಿತು. ಚೀನಾಕ್ಕೆ ಭಾರತದ ಭೂ ಭಾಗವನ್ನು ಒಪ್ಪಿಸಿತು. ದೋಕ್ಲಾಂ ವಿಷಯದಲ್ಲಿ ರಾಹುಲ್ ಗಾಂಧಿ ರಹಸ್ಯವಾಗಿ ಚೀನಾ ರಾಯಭಾರ ಕಚೇರಿಗೆ ಭೇಟಿ ನೀಡಿದರು ಎಂಬ ಆರೋಪವಿದೆ. ಈ ಮೂಲಕ ಚೀನಾ ಭಾರತದ ಪ್ರಾಂತ್ಯವನ್ನು ಆಕ್ರಮಿಸಿಕೊಳ್ಳಲು ಮುಕ್ತ ಅವಕಾಶ ಮಾಡಿಕೊಟ್ಟಂತಾಗಿತ್ತು ಎಂಬ ಗಂಭೀರ ಆರೋಪವಿದೆ.
ಈ ಕುರಿತು ಮೊನ್ನೆಯಷ್ಟೇ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ರಾಹುಲ್ ಮೇಲೆ ಹರಿಹಾಯ್ದಿದ್ದರು. ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ದೇಶವನ್ನು ವಿಭಜಿಸುವಂತಹ ಹೇಳಿಕೆ ನೀಡುತ್ತಿದ್ದು, ಸಶಸ್ತ್ರ ಪಡೆಗಳ ಸ್ಥೈರ್ಯಗುಂದಿಸಲು ಯತ್ನಿಸುತ್ತಿದ್ದಾರೆ. ರಾಹುಲ್ ಅವರ ಈ ನಡೆಯು ಚೀನಾದ ಕಮ್ಯುನಿಸ್ಟ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಒಡಂಬಡಿಕೆಯ ಪರಿಣಾಮವೇ ಎಂದು ಅವರು ಪ್ರಶ್ನಿಸಿದ್ದರು. ಅವರ ಈಗಿನ ಹೇಳಿಕೆಗಳು ಉಭಯ ಪಕ್ಷಗಳ ನಡುವಿನ ಒಪ್ಪಂದದ ಫಲವೇ ಇರಬೇಕು ಎಂದು ಅವರು ಆರೋಪಿಸಿದ್ದರು.
ಈ ಕುರಿತು ಇದೀಗ ತನಿಖೆ ನಡೆಸಲು ಆದೇಶಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಳ್ಳಲಾಗಿದೆ. (ಏಜೆನ್ಸೀಸ್)