ಚಮ್ಮಾರನಿಗೆ ಚಪ್ಪಲಿ ಹೊಲಿಯುವ ಯಂತ್ರ ಕೊಡಿಸಿದ ರಾಹುಲ್​ ಗಾಂಧಿ; ವ್ಯಾಪಕ ಮೆಚ್ಚುಗೆಗೆ ಪಾತ್ರವಾಯ್ತು ರಾಗಾ ನಡೆ

Rahul Gandhi
Published on

ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಶುಕ್ರವಾರ (ಜುಲೈ 26) ಉತ್ತರಪ್ರದೇಶದ ಸುಲ್ತಾನ್​ಪುರಕ್ಕೆ ಭೇಟಿ ನೀಡಿದ್ದರು. ತಮ್ಮ ಪ್ರವಾಸದ ವೇಳೆ ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ದಿಢೀರ್ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದ ರಾಹುಲ್​ ಇದೀಗ ತಮ್ಮ ಕೆಲಸದ ಮೂಲಕ ಸುದ್ದಿಯಾಗಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ  ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದ ರಾಹುಲ್​ ವಿಚಾರಣೆ ಮುಗಿಸಿ ದೆಹಲಿಯತ್ತ ವಾಪಸ್​ ಆಗುವ ವೇಳೆ ಚಮ್ಮಾರನ ಅಂಗಡಿಗೆ ದಿಢೀರ್​ ಭೇಟಿ ನೀಡಿ ಮಾಲೀಕನ ಜೊತೆ ಮಾತುಕತೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಕಾಂಗ್ರೆಸ್ ನಾಯಕನ ಅನಿರೀಕ್ಷಿತ ಭೇಟಿಯಿಂದ ಅಂಗಡಿ ಮಾಲೀಕ  ರಾಮ್ ಚೈತ್ ಆಶ್ಚರ್ಯಚಕಿತಗೊಂಡಿದ್ದು, ರಾಹುಲ್​ ಬಳಿ ಅವರ ಹಾಗೂ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಸಮಸ್ಯೆಗಳನ್ನು ಆಲಿಸಿದ ರಾಹುಲ್​ ಬಗೆಹರಿಸಲು ಬೇಕಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದೀಗ ರಾಹುಲ್​ ರಾಮ್​ ಜೆತ್​ಗೆ ಶೂ ಹೊಲೆಯುವ ಯಂತ್ರವನ್ನು ನೀಡಿದ್ದು, ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಎಐಸಿಸಿ, ನಿನ್ನೆ ನಮ್ಮ ನಾಯಕ ರಾಹುಲ್ ಗಾಂಧಿಯವರು ಸುಲ್ತಾನ್‌ಪುರದಲ್ಲಿ (ಯುಪಿ) ರಾನ್​ ಚೈತ್​ ಅವರನ್ನು ಭೇಟಿಯಾಗಿ ಕೆಲಸದ ಬಗ್ಗೆ ತಿಳಿದುಕೊಂಡಿದ್ದರು. ಇದೀಗ ಅವರ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಶೂ ಹೊಲೆಯುವ ಯಂತ್ರವನ್ನು ಕಳುಹಿಸಿಕೊಡಲಾಗಿದ್ದು, ಎಲ್ಲರಿಗೂ ನಾಯಕನಾಗಿ ರಾಹುಲ್ ಗಾಂಧಿಯವರ ಸಮರ್ಪಣಾಭಾವವನ್ನು ಈ ಸೂಚಕ ಉದಾಹರಿಸುತ್ತದೆ ಎಂದು ಬರೆದುಕೊಂಡಿದೆ.

ಇತ್ತ ರಾಹುಲ್​ ಗಾಂಧಿ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಹಲವರು ಇವರ ಕಾರ್ಯವನ್ನು ಮೆಚ್ಚಿ ಕಮೆಂಟ್​ ಹಾಕುತ್ತಿದ್ದಾರೆ. ರಾಹುಲ್​ ಗಾಂಧಿ ಸಹಾಯಹಸ್ತ ಚಾಚಿರುವುದು ಇದೇ ಮೊದಲಲ್ಲ. ಈ ಹಿಂದೆ ಭಾರತ್ ಜೋಡೋ ಯಾತ್ರೆ ಹಾಗೂ ಎಲೆಕ್ಷನ್​ ರ್‍ಯಾಲಿ​ಗಳಲ್ಲಿ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net