

ಪ್ಯಾರಿಸ್: ಸಿಟಿ ಆಫ್ ಲವ್ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್ ಆತಿಥ್ಯದಲ್ಲಿ ಜುಲೈ 26ರಿಂದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಿದ್ದು, 33ನೇ ಆವೃತ್ತಿಯ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ಗಳು ಶುಭಾರಂಭ ಕಂಡಿದ್ದು, ಇದೀಗ ಭಾರತ ಪುರುಷರ ಹಾಕಿ ತಂಡ ನ್ಯೂಜಿಲೆಂಡ್ ಎದುರು 3-2 ಗೋಲುಗಳ ಅಂತರದಲ್ಲಿ ಗೆಲುವು ಕಂಡಿದೆ.
ಪೂಲ್ ಬಿ ನಲ್ಲಿ ಕಣಕ್ಕಿಳಿದಿರುವ ಭಾರತ ತಂಡವು ತನ್ನ ಮೊದಲ ಪಂಧ್ಯದಲ್ಲಿ ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಿತ್ತು. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಭಾರತ ತಂಡವು ಆ ಬಳಿಕ ಎದುರಾಳಿಗಳ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯಗಳಿಸಿದೆ.
ಪಂದ್ಯ ಆರಂಭವಾದ 8ನೇ ನಿಮಿಷಕ್ಕೆ ಗೋಲು ಬಾರಿಸುವ ಮೂಲಕ 0-1 ಅಂತರದಿಂದ ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್ ತಂಡವು ಭಾರತದ ವಿರುದ್ಧ ಮುನ್ನಡೆ ಸಾಧಿಸಿತು. 24ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ಅನ್ನು ಭಾರತದ ಮನ್ದೀಪ್ ಸಿಂಗ್ ಯಶಸ್ವಿಯಾದರು. ಈ ಮೂಲಕ ಭಾರತ ತಂಡವು ನ್ಯೂಜಿಲೆಂಡ್ ಎದುರು ಸಮಬಲ ಸಾಧಿಸಿತು. ಇದಾದ ಬಳಿಕ ನ್ಯೂಜಿಲೆಂಡ್ ಎದುರು ಪ್ರತಿದಾಳಿ ಆರಂಭಿಸಿದ ಭಾರತ ತಂಡವು 34ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿತು.
ಇದಾದ ಬಳಿಕ 52ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸುವ ಮೂಲಕ ನ್ಯೂಜಿಲೆಂಡ್ ತಂಡವು ಸಮಬಲ ಸಾಧಿಸಿತು. ಇನ್ನೇನು ಪಂದ್ಯ ಡ್ರಾಗೊಂಡಿತು ಎನ್ನುವಾಗ ನ್ಯೂಜಿಲೆಂಡ್ ತಂಡದ ಆಟಗಾರನೋರ್ವ ಫೌಲ್ ಮಾಡಿದ ಕಾರಣ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಲಭಿಸಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ನಾಯಕ ಹರ್ಮನ್ ಹರ್ಮನ್‌ಪ್ರೀತ್ ಸಿಂಗ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಭಾರತ ತಂಡವು 3-2 ಗೋಲುಗಳ ಅಂತರದಿಂದ ನ್ಯೂಜಿಲೆಂಡ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು. ಭಾರತ ತಂಡವು ತನ್ನ ಎರಡನೇ ಪಂದ್ಯವನ್ನು ಜುಲೈ 29ರಂದು ಅರ್ಜೆಂಟಿನಾ ವಿರುದ್ಧ ಆಡಲಿದೆ.