ಏನಿದು ರಾಹುಲ್​ ಗಾಂಧಿ ಮತಗಳ್ಳತನ ಆರೋಪ? ಚುನಾವಣಾ ಆಯೋಗದ ಸವಾಲೇನು? ಇಲ್ಲಿದೆ ಕಂಪ್ಲೀಟ್​ ಚಿತ್ರಣ | Rahul Gandhi

ವಿಜಯವಾಣಿ (28)
Published on

Rahul Gandhi: ಕಾಂಗ್ರೆಸ್​ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಇದೀಗ ಭಾರೀ ಚರ್ಚೆಯಲ್ಲಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಚುನಾವಣಾ ಆಯೋಗ ಕೈಜೋಡಿಸಿತ್ತು. ಇದಕ್ಕೆ ನಾನು ಒಂದಷ್ಟು ಸಾಕ್ಷ್ಯಗಳನ್ನು ಕಲೆಹಾಕಿದ್ದೇನೆ ಎಂದು ರಾಹುಲ್​ ಆರೋಪಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಏನಿದು ಆರೋಪ?

ದೇಶದ ಹಲವು ರಾಜ್ಯಗಳ ಮತದಾರರ ಪಟ್ಟಿಗಳಲ್ಲಿ ನಕಲಿ ಮತದಾರರ ಹೆಸರುಗಳಿವೆ ಎಂದಿರುವ ರಾಹುಲ್ ಗಾಂಧಿ, ಚುನಾವಣಾ ಫಲಿತಾಂಶಗಳು, ಎಕ್ಸಿಟ್​ ಪೋಲ್​ ಮತ್ತು ಅಭಿಪ್ರಾಯ ಸಮೀಕ್ಷೆಗಳ ವಿರುದ್ಧವಾಗಿಯೇ ಹೊರಬರುತ್ತಿರುವುದು ತೀರ ಆಶ್ಚರ್ಯ ಮೂಡಿಸಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಮಹಾರಾಷ್ಟ್ರ, ಹರಿಯಾಣ ಮತ್ತು ಮಧ್ಯಪ್ರದೇಶದ ಚುನಾವಣಾ ಫಲಿತಾಂಶಗಳನ್ನು ಟೀಕಿಸಿರುವ ಕೈ ನಾಯಕ, ಕಳೆದ ವರ್ಷದಲ್ಲಿ (2024) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ವಿಧಾನಸಭೆಯ ಕ್ಷೇತ್ರದಲ್ಲಿ ಭಾರೀ ಮತಗಳ್ಳತನವಾಗಿದೆ ಎಂದಿದ್ದಾರೆ.

ಇದಕ್ಕಾಗಿ ಬಿಜೆಪಿ ಜೊತೆಗೆ ಚುನಾವಣಾ ಆಯೋಗ ಶಾಮಿಲಾಗಿರುವುದು ನಮ್ಮ ಪಕ್ಷದ ಆಂತರಿಕ ತನಿಖೆಯಿಂದ ಪತ್ತೆಯಾಗಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ಕಿಡಿಕಾರಿದ್ದು, ಇದೆಲ್ಲವೂ ಆಧಾರರಹಿತ ಎಂದು ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ರಾಹುಲ್​, ನಾವು ಒಂದಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಎಂದು ಪ್ರಬಲ ವಾದ ಮಂಡಿಸಿರುವುದು ಹಲವರ ಹುಬ್ಬೇರಿಸಿದೆ.

ಕೇವಲ 5 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ 40 ಲಕ್ಷ ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗವು ತಮಗೆ ಮತದಾರರ ಪಟ್ಟಿಯನ್ನು ನೀಡಲು ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ. ಅದೇ ರೀತಿ, ಕರ್ನಾಟಕದ ಮಹದೇವಪುರ ಕ್ಷೇತ್ರದ 6.5 ಲಕ್ಷ ಮತಗಳಲ್ಲಿ ಒಂದು ಲಕ್ಷ ಮತಗಳು ನಕಲಿ ಆಗಿವೆ. ಇಲ್ಲಿ ಮತಗಳ್ಳತನ ನಡೆದಿದೆ. ಬೆಂಗಳೂರು ಕೇಂದ್ರ ಲೋಕಸಭಾ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ನೋಡಿದರೆ, ನಕಲಿ ಮತದಾರರಿದ್ದಾರೆ ಎಂಬುದು ಸ್ಪಷ್ಟ ಎಂದಿದ್ದಾರೆ.

ರಾಹುಲ್​ ಆರೋಪಕ್ಕೆ EC ತಿರುಗೇಟು

ರಾಹುಲ್ ಗಾಂಧಿ ಅವರ ಆರೋಪಗಳಿಗೆ ಲಿಖಿತ ಪತ್ರದ ಮೂಲಕ ಪ್ರತಿಕ್ರಿಯಿಸಿರುವ ಕರ್ನಾಟಕ ಚುನಾವಣಾ ಆಯೋಗ, "ಮತದಾರರ ಪಟ್ಟಿಯಲ್ಲಿ ಅನರ್ಹ ಮತದಾರರನ್ನು ಸೇರಿಸಲಾಗಿದೆ ಮತ್ತು ಅರ್ಹ ಮತದಾರರನ್ನು ಹೊರಗಿಡಲಾಗಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಆಯಾ ಮತದಾರರ ವಿವರಗಳನ್ನು ಘೋಷಣೆಯ ರೂಪದಲ್ಲಿ ಒದಗಿಸಬೇಕು. ಇಲ್ಲವೇ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಪ್ಪು ದಾಖಲೆ ನೀಡಿದರೆ ಸೆಕ್ಷನ್ 227 ಭಾರತ ನ್ಯಾಯ ಸಂಹಿತೆ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗುವುದು" ಎಂದು ಹೇಳಿದೆ.

ಪತ್ರದ ಮೂಲಕ ಸವಾಲು

"ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಪ್ರಮಾಣವಚನ ಸ್ವೀಕರಿಸಿ, ಘೋಷಣಾ ಪತ್ರ ಸಲ್ಲಿಸಬೇಕು. ಇದು ಸಾಧ್ಯವಾಗಲಿಲ್ಲ ಎಂದಾದರೆ, ತಾವು ಕಟ್ಟಿರುವ ಸುಳ್ಳು ಕಥೆಯ ಸಾಕ್ಷ್ಯವನ್ನು ಹಿಂಪಡೆಯಬೇಕು" ಎಂದು ಚುನಾವಣಾ ಆಯೋಗ ಸವಾಲು ಹಾಕಿದೆ. "ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸಲಾಗಿದೆ ಮತ್ತು ಚುನಾವಣಾ ಫಲಿತಾಂಶಗಳನ್ನು ನ್ಯಾಯಾಲಯದಲ್ಲಿ ಚುನಾವಣಾ ಅರ್ಜಿಯ ಮೂಲಕ ಮಾತ್ರ ಪ್ರಶ್ನಿಸಬಹುದು" ಎಂದು ತಿಳಿಸಲಾಗಿದೆ.

“ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಪ್ಯಾರಾ 3ರಲ್ಲಿ ಉಲ್ಲೇಖಿಸಲಾದ ಮತದಾರರ ಪಟ್ಟಿಯಲ್ಲಿ ಅನರ್ಹ ಮತದಾರರ ಸೇರ್ಪಡೆ ಮತ್ತು ಅರ್ಹ ಮತದಾರರ ಹೊರಗಿಡುವಿಕೆಯ ಬಗ್ಗೆ ನೀವು ಪ್ರಸ್ತಾಪಿಸಿದ್ದೀರಿ ಎಂದು ತಿಳಿದುಬಂದಿದೆ. 1960ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(ಬಿ) ಅಡಿಯಲ್ಲಿ ಲಗತ್ತಿಸಲಾದ ಘೋಷಣೆ/ಪ್ರಮಾಣವಚನಕ್ಕೆ ಸಹಿ ಹಾಕಿ ಹಿಂದಿರುಗಿಸಲು ವಿನಂತಿಸಲಾಗಿದೆ. ಇದರಿಂದಾಗಿ ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು” ಎಂದು ಸವಾಲು ಹಾಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net