

Kapil Sharma Cafe: ಇತ್ತೀಚೆಗಷ್ಟೇ ಕೆನಡಾದಲ್ಲಿರುವ ಬಾಲಿವುಡ್ನ ಹಾಸ್ಯನಟ ಕಪಿಲ್ ಶರ್ಮಾ ಒಡೆತನದ ಕೆಫೆಯ ಮೇಲೆ ಖಲಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಕೆಫೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಈ ದಾಳಿ ಸಂಭವಿಸಿತ್ತು. ಇದೀಗ ಮತ್ತೇ ಗುಂಡು ಹಾರಿಸಲಾಗಿದ್ದು, ಗುಂಡು ಹಾರಿಸಲಾದ ದೃಶ್ಯಗಳು ಸ್ಥಳೀಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಮೊದಲು ಹರ್ಜಿತ್ ಸಿಂಗ್ ಲಡ್ಡಿ ನೇತೃತ್ವದಲ್ಲಿ ಗುಂಡಿನ ದಾಳಿ ನಡೆದಿತ್ತು. ಆದರೀಗ, ಗುರ್‌ಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್ ಹೆಸರಿನ ಎರಡು ಗ್ಯಾಂಗ್‌ಗಳು ದಾಳಿಯ ಹೊಣೆಯನ್ನು ಹೊತ್ತುಕೊಂಡಿವೆ. ಘಟನೆಗೆ ಸಂಬಂಧಿಸಿದಂತೆ ಜಾಲತಾಣಗಳಲ್ಲಿ ದೃಶ್ಯಗಳು ಹರಿದಾಡಿವೆ.
ಮೊದಲ ದಾಳಿಗೆ ಅಂದು 'ದಿ ಕಪಿಲ್ ಶರ್ಮ ಶೋ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ನೀಡಿದ್ದ ಆ ಒಂದು ಹೇಳಿಕೆಯೇ ಕಾರಣ. ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ನಿಹಾಂಗ್ ಸಿಖ್ಖರ ಸಾಂಪ್ರದಾಯಿಕ ವೇಷಭೂಷಣ ಮತ್ತು ನಡವಳಿಕೆಯ ಬಗ್ಗೆ ವ್ಯಂಗ್ಯವಾಡಿದ್ದರು. ಇದು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಜೊತೆ ನಂಟು ಹೊಂದಿರುವ ಹರ್ಜಿತ್ ಸಿಂಗ್ ಲಡ್ಡಿ ಹೇಳಿದ್ದನು.