ಜಿಲ್ಲಾಸ್ಪತ್ರೆ, ಸಖಿ, ಶಕ್ತಿ ಕೇಂದ್ರಕ್ಕೆ ಭೇಟಿ, ಪರಿಶೀಲನೆ; ಉತ್ತಮ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಿದ ಡಾ.ನಾಗಲಕ್ಷ್ಮೀ

7 HVR 5 B
Published on

ಹಾವೇರಿ: ಆಸ್ಪತ್ರೆಗೆ ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಹಾಗೂ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ, ರೋಗಿಗಳೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು. ಶಸ್ತ್ರ ಚಿಕಿತ್ಸೆ ವಿಭಾಗ, ಹೆರಿಗೆ ವಿಭಾಗಕ್ಕೆ ತೆರಳಿ, ಬಾಣಂತಿ ಹಾಗೂ ಮಕ್ಕಳ ಆರೋಗ್ಯ ವಿಚಾರಿಸಿದರು, ಹಸುಗೂಸುಗಳನ್ನು ಎತ್ತಿಕೊಂಡು ಮುದ್ದಾಡಿದರು. ಮಾತೃವಂದನಾ ಸೌಲಭ್ಯ ಪಡೆಯುತ್ತಿರುವ ಬಗ್ಗೆ ವಿಚಾರಿಸಿದರು. ಶೌಚಗೃಹಗಳಲ್ಲಿ ನಿರಂತರವಾಗಿ ನೀರು ಸರಬರಾಜು ಮಾಡುವಂತೆ ಸೂಚಿಸಿದರು. ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ದೌರ್ಜನ್ಯ, ಪೋಕ್ಸೋ ಪ್ರಕರಣ ಸೇರಿದಂತೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಾಜಿ ನಗರದಲ್ಲಿರುವ ನೊಂದಮಹಿಳೆಯರು ವಾಸವಿರುವ ಶಕ್ತಿ ಸದನಕ್ಕೆ ಭೇಟಿ ನೀಡಿ, ನೊಂದ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಡಾ.ಪರಸಪ್ಪ ಚುರ್ಚಿಹಾಳ, ಶಕ್ತಿ ಸದನದ ಪರಿಮಳಾ ಜೈನ್, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net