ಕಾಂಗ್ರೆಸ್​ ಬಿಟ್ಟ ಜಿಲೇಬಿ ಬಾಣ ತಿರುಗುಬಾಣವಾಯ್ತು! ಹರಿಯಾಣದಲ್ಲಿ ರಾಹುಲ್​ಗೆ​ ಕಹಿ, ಬಿಜೆಪಿಗೆ ಸಿಹಿ | Jalebi

Jalebi Rahul Gandhi
Published on

ನವದೆಹಲಿ: ಹರಿಯಾಣ ಚುನಾವಣಾ ( Haryana Election ) ಸಂದರ್ಭದಲ್ಲಿ ಜಾಟ್ಸ್​ ಮತ್ತು ಜಿಲೇಬಿ ( Jalebi ) ಎಂಬ ಎರಡು ಪದಗಳು ಭಾರಿ ಸದ್ದು ಮಾಡಿದ್ದವು. ಹೋದ ಕಡೆಯಲೆಲ್ಲ ಕಾಂಗ್ರೆಸ್ ( Congress )​ ಪಕ್ಷ ಈ ಎರಡು ಪದಗಳನ್ನು ಪದೇಪದೆ ಉಲ್ಲೇಖಿಸುತ್ತಿತ್ತು. ಆದರೆ, ಇಂದಿನ ಚುನಾವಣಾ ಫಲಿತಾಂಶ ನೋಡಿದರೆ ಕಾಂಗ್ರೆಸ್​ ಪಾಲಿಗೆ ಜಿಲೇಬಿ ( Jalebi ) ರುಚಿ ನೀಡದಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಹರಿಯಾಣದ ಗೊಹಾನಾದಲ್ಲಿ ತಯಾರಾಗುವ ಜಿಲೇಬಿಗೆ ಒಳ್ಳೆಯ ಹೆಸರಿದೆ. ಹರಿಯಾಣ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ( Rahul Gandhi ) ಆಗಾಗ ಜಿಲೇಬಿಯನ್ನು ಪ್ರಸ್ತಾಪ ಮಾಡುತ್ತಲೇ ಇದ್ದರು. ತನ್ನ ಪ್ರತಿ ಭಾಷಣದಲ್ಲಿ ಜಿಲೇಬಿ ಹೆಸರೇಳದೇ ಇರುತ್ತಿರಲಿಲ್ಲ. ರಸಭರಿತವಾದ ಸಿಹಿ ತಿಂಡಿಯನ್ನು ಹೆಚ್ಚಾಗಿ ತಯಾರಿಸಿ ರಫ್ತು ಮಾಡುವಂತೆ ಕರೆ ನೀಡಿದ ತನ್ನ ಹೇಳಿಕೆಯನ್ನು ಕೂಡ ಬಿಜೆಪಿ ಲೇವಡಿ ಮಾಡಿದೆ ಎಂದು ರಾಹುಲ್​ ಗಾಂಧಿ ಹೇಳುತ್ತಲೇ ಇದ್ದರು.

ಇನ್ನು ಇಂದಿನ ಹರಿಯಾಣ ಚುನಾವಣಾ ಫಲಿತಾಂಶ ಆರಂಭದಲ್ಲೇ ರೋಚಕ ತಿರುವು ಪಡೆದುಕೊಂಡಿತು. ಆರಂಭದಲ್ಲಿ ಕಾಂಗ್ರೆಸ್​ ಮುನ್ನಡೆ ಸಾಧಿಸಿತ್ತು. ಆದರೆ, ಫಲಿತಾಂಶ ಹೊರಬೀಳುವ ಮುನ್ನವೇ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಜಿಲೇಬಿ ಹಂಚಿ ಸಂಭ್ರಮಾಚರಣೆ ಮಾಡಿದರು. ಎರಡ್ಮೂರು ಸುತ್ತುಗಳ ಬಳಿಕ ಫಲಿತಾಂಶವೇ ಬದಲಾಯಿತು. ಮುನ್ನಡೆಯಲ್ಲಿದ್ದ ಕಾಂಗ್ರೆಸ್​ ಹಿನ್ನಡೆ ಅನುಭವಿಸಿತು. ಬಿಜೆಪಿ ಮುನ್ನಡೆ ಕಾಯ್ದುಕೊಂಡಿತು. ಇದೀಗ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಇದೇ ಸಂಭ್ರಮಾಚರಣೆ ಬಿಜೆಪಿಯತ್ತ ವಾಲಿದೆ. ಹೀಗಾಗಿ ಬಿಜೆಪಿ ಯಾವ ರೀತಿ ಸಂಭ್ರಮಿಸುತ್ತದೆ? ಪಕ್ಷದ ಮೂಲಗಳ ಪ್ರಕಾರ ಈಗಾಗಲೇ ಜಿಲೇಬಿಗಳನ್ನು ಆರ್ಡರ್​ ಮಾಡಲಾಗಿದ್ದು, ಬಿಜೆಪಿ ಮುಖ್ಯ ಕಚೇರಿಯಲ್ಲಿ ಅದ್ಧೂರಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಸಂಭ್ರಮಾಚರಣೆಗೆ ಬಿಜೆಪಿ ಜಿಲೇಬಿಯನ್ನು ಆಯ್ಕೆ ಮಾಡಿರುವುದು ಕಾಂಗ್ರೆಸ್ ಮತ್ತು ರಾಹುಲ್​ ಗಾಂಧಿಗೆ ಸ್ಪಷ್ಟ ರಾಜಕೀಯ ಸಂದೇಶವಾಗಿದೆ.

ಗೋಹಾನಾದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಮಾಥುರಾಮ್ ಹಲ್ವಾಯಿಯ ಜಿಲೇಬಿ ಬಾಕ್ಸ್​ ಅನ್ನು ಹಿಡಿದುಕೊಂಡು, ಇವುಗಳನ್ನು ದೇಶಾದ್ಯಂತ ಮಾರಾಟ ಮಾಡಬೇಕು ಮತ್ತು ರಫ್ತು ಮಾಡಬೇಕು ಎಂದು ಹೇಳಿದ್ದರು. ಇದೇ ಜಿಲೇಬಿಯಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದಿದ್ದರು.

Rahul Gandhi

ಮಾಥುರಾಮ್ ಅವರ ಜಿಲೇಬಿಯನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಿದರೆ ಮತ್ತು ರಫ್ತು ಮಾಡಿದರೆ, ಒಂದು ದಿನಕ್ಕೆ 20,000 ದಿಂದ 50,000 ಜನರು ಅವರ ಕಾರ್ಖಾನೆಯಲ್ಲಿ ಕೆಲಸ ಮಾಡಬಹುದು. ಮಾಥುರಾಮ್ ಅವರಂತಹ ವ್ಯಾಪಾರಿಗಳು ಕೇಂದ್ರದ ನೋಟು ಅಮಾನ್ಯೀಕರಣ ಮತ್ತು ಜಿಎಸ್​ಟಿಯಿಂದ ನೊಂದಿದ್ದಾರೆ ಎಂದು ರಾಹುಲ್​ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಯ ಈ ಹೇಳಿಕೆಗಳನ್ನು ಬಿಜೆಪಿ ನಾಯಕರು ಗೇಲಿ ಮಾಡಿದರು. ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಮಾತನಾಡಿ, ನನಗೂ ಗೋಹನಾ ಜಿಲೇಬಿ ಇಷ್ಟ. ಈಗ ರಾಹುಲ್ ಗಾಂಧಿ ಫ್ಯಾಕ್ಟರಿ ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಜಿಲೇಬಿಯನ್ನು ಹೇಗೆ ತಯಾರಿಸುತ್ತಾರೆ ಮತ್ತು ಹೇಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ರಾಹುಲ್​ ಅವರಿಗೆ ಭಾಷಣವನ್ನು ಬರೆದುಕೊಟ್ಟವರು ಸರಿಯಾಗಿ ಬರೆದುಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ರಾಹುಲ್​ ಗಾಂಧಿ ತಮ್ಮ ಮನೆಗೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ವ್ಯಂಗ್ಯವಾಡಿದ್ದರು.

ಕುತೂಹಲಕಾರಿ ಸಂಗತಿ ಏನೆಂದರೆ, ತಿಂಗಳುಗಳ ಹಿಂದೆ ಅಂದರೆ, ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಗೋಹನಾ ಜಿಲೇಬಿ ಪ್ರಸ್ತಾಪವಾಗಿತ್ತು. ಇಂಡಿಯಾ ಒಕ್ಕೂಟದ ಮೇಲೆ ದಾಳಿ ಮಾಡಿದ್ದ ಪ್ರಧಾನಿ ಮೋದಿ, ತಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರು ಪ್ರಧಾನ ಮಂತ್ರಿಗಳನ್ನು ಹೊಂದುವ ಸೂತ್ರವನ್ನು ಇಂಡಿಯಾ ಒಕ್ಕೂಟ ಹೊಂದಿದೆ. ಪ್ರಧಾನಿ ಹುದ್ದೆಯೆಂದರೆ ನಮ್ಮ ಮಾಥುರಾಮ್ ಅವರ ಜಲೇಬಿಯೇ ಎಂದು ಅವರನ್ನು ಕೇಳಿ ಎಂದು ಜನರನ್ನು ಉದ್ದೇಶಿಸಿ ಮೋದಿ ಹೇಳಿದ್ದರು.

ಪಿಟಿಐ ವರದಿಯ ಪ್ರಕಾರ ಪ್ರಸಿದ್ಧ ಗೋಹನಾ ಜಲೇಬಿಯು 1958ರಲ್ಲಿ ದಿವಂಗತ ಮಾಥುರಾಮ್ ಅವರು ಮಾರಾಟ ಮಾಡಲು ಪ್ರಾರಂಭಿಸಿದಾಗ ಅಸ್ತಿತ್ವಕ್ಕೆ ಬಂದಿತು. ಈಗ ಅವರ ಮೊಮ್ಮಕ್ಕಳಾದ ರಮಣ್ ಗುಪ್ತಾ ಮತ್ತು ನೀರಜ್ ಗುಪ್ತಾ ಅವರು ವ್ಯವಹಾರವನ್ನು ನಡೆಸುತ್ತಿದ್ದಾರೆ. ಈ ಜಿಲೇಬಿಯನ್ನು ಶುದ್ಧ ದೇಸಿ ತುಪ್ಪದಿಂದ ತಯಾರಿಸಲಾಗುತ್ತದೆ. ಇದು ಗರಿಗರಿಯಾಗಿ, ಮೃದುವಾಗಿರುತ್ತದೆ. ಪ್ರತಿ ಜಿಲೇಬಿ ಸುಮಾರು 250 ಗ್ರಾಂ ತೂಗುತ್ತದೆ. ಒಂದು ಕೆಜಿ ತೂಕದ ನಾಲ್ಕು ಜಿಲೇಬಿ ಬಾಕ್ಸ್‌ನ ಬೆಲೆ 320 ರೂಪಾಯಿ. ಈ ತಿಂಡಿಯನ್ನು ಒಂದು ವಾರಗಳ ಕಾಲ ಇಡಹುದು ಎಂದು ರಮಣ್​ ಗುಪ್ತಾ ಹಿಂದೊಮ್ಮೆ ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net