

ವಿಜಯವಾಡ: ಸ್ನೇಹಿತರ ( Friends ) ಬಳಿ ಬಾಜಿ ( Betting ) ಕಟ್ಟಿ ಜೀವಂತ ಮೀನು ( Live Fish ) ನುಂಗಿದ ಯುವಕನೊಬ್ಬ ( Young Man ) ಸಾವು-ಬದುಕಿನ ನಡುವೆ ಹೋರಾಡಿ ಮರುಜನ್ಮ ಪಡೆದ ಘಟನೆ ಆಂಧ್ರ ಪ್ರದೇಶ ( Andhra Pradesh )ದ ಕರ್ನೂಲ್ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿದೆ.
ವೆಲ್ದುರ್ತಿ ಮಂಡಲದ ಬೊಗುಲು ಗ್ರಾಮದ ನಿವಾಸಿ ವೆಂಕಟಸ್ವಾಮಿ, ತನ್ನ ಸ್ನೇಹಿತರ ಬಳಿ ತಮಾಷೆಯಾಗಿ ಬಾಜಿ ಕಟ್ಟಿದ್ದ. ಅದೇನೆಂದರೆ, ಜೀವಂತ ಮೀನನ್ನು ಹಾಗೇ ನುಂಗಿಬಿಡುತ್ತೇನೆ ನೋಡುತ್ತೀರ ಎಂದಿದ್ದ. ಸರಿ ನೋಡೇ ಬಿಡೋಣ ನುಂಗಿ ತೋರಿಸು ಎಂದು ಸ್ನೇಹಿತರು ಕೂಡ ಸವಾಲು ಹಾಕಿದ್ದರು.
ಬಾಜಿ ಕಟ್ಟಿದ ವೆಂಕಟಸ್ವಾಮಿ ಜೀವಂತ ಮೀನನ್ನು ಬಾಯಿ ಹಾಕಿ ನುಂಗಲು ಯತ್ನಿಸಿದ. ಆದರೆ, ಮೀನು ಹೊಟ್ಟೆಯ ಒಳಗೆ ಹೋಗದೆ ಗಂಟಲಲ್ಲಿ ಸಿಲುಕಿಕೊಂಡಿತು. ಇದರಿಂದ ಅಸ್ವಸ್ಥಗೊಂಡ ವೆಂಕಟಸ್ವಾಮಿಯನ್ನು ತಕ್ಷಣ ಕರ್ನೂಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಯಿತು.
ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ವೆಂಕಟಸ್ವಾಮಿ ಗಂಟಲಿನಲ್ಲಿ ಸಿಲುಕಿದ್ದ ಮೀನನ್ನು ವೈದ್ಯರು ಹೊರತೆಗೆದಿದ್ದಾರೆ. ಸ್ವಲ್ಪ ತಡವಾಗಿದ್ದರೂ ವೆಂಕಟಸ್ವಾಮಿ ಪ್ರಾಣವೇ ಹೋಗುತ್ತಿತ್ತು. ಅವರಿಗೆ ಮರುಜನ್ಮ ಸಿಕ್ಕಿದಂತಾಗಿದೆ. ಯಾರೂ ಕೂಡ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ವೈದ್ಯರು ಸಲಹೆ ನೀಡಿ ವೆಂಕಟಸ್ವಾಮಿಯನ್ನು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ. (ಏಜೆನ್ಸೀಸ್)