

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ( IPL ) ಟ್ರೋಫಿ ಗೆಲ್ಲದ ತಂಡಗಳಲ್ಲಿ 'ಪಂಜಾಬ್ ಕಿಂಗ್ಸ್' ತಂಡವೂ ಒಂದು. ಈ ತಂಡ ಕಳೆದ 17 ಸೀಸನ್‌ಗಳಲ್ಲಿ ಒಮ್ಮೆಯೂ ಫೈನಲ್ ತಲುಪಿಲ್ಲ. ಇದರ ನಡುವೆ ಹೆಸರು ಬದಲಾಯಿಸಿದರೂ (ಕಿಂಗ್ಸ್ ಇಲೆವೆನ್ ಪಂಜಾಬ್ನಿಂದ ಪಂಜಾಬ್ ಕಿಂಗ್ಸ್ ಎಂದು ಬದಲು) ಯಾವುದೇ ಪ್ರಯೋಜನವಾಗಲಿಲ್ಲ. ಬಾಲಿವುಡ್ ನಟಿ ಮತ್ತು ಪಂಜಾಬ್ ಕಿಂಗ್ಸ್ ಸಹ-ಮಾಲಕಿ ಪ್ರೀತಿ ಝಿಂಟಾ ( Preity Zinta ) ಅವರ ಪ್ರಶಸ್ತಿಯ ಕನಸು ಹಾಗೆಯೇ ಉಳಿದಿದೆ. ಆದರೆ, ಕೊನೆಗೂ ಪ್ರೀತಿ ಝಿಂಟಾ ಕಪ್ ಕನಸು ನನಸಾಗಿದೆ. ಆದರೆ, ಐಪಿಎಲ್ನಲ್ಲಿ ಅಲ್ಲ, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ.
ಭಾನುವಾರ ಗಯಾನಾದಲ್ಲಿ ನಡೆದ CPL-2024 ಫೈನಲ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡ, ಗಯಾನಾ ಅಮೆಜಾನ್ ವಾರಿಯರ್ಸ್ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗಯಾನಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು. ಪ್ರಿಟೋರಿಯಸ್ (25 ರನ್ 12 ಎಸೆತ, 2 ಬೌಂಡರಿ, 2 ಸಿಕ್ಸರ್) ಮತ್ತು ಶೈ ಹೋಪ್ (22 ರನ್ 24 ಎಸೆತ, 4 ಬೌಂಡರಿ) ಬ್ಯಾಟಿಂಗ್ನಲ್ಲಿ ಮಿಂಚಿದರು.
ಗುರಿ ಬೆನ್ನತ್ತಿದ ಸೇಂಟ್ ಲೂಸಿಯಾ ತಂಡ 18.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಆ್ಯರೋನ್ ಜೋನ್ಸ್ (ಔಟಾಗದೆ 48 ರನ್, 31 ಎಸೆತ, 2 ಬೌಂಡರಿ, 4 ಸಿಕ್ಸರ್) ಮತ್ತು ರೋಸ್ಟನ್ ಚೇಸ್ (ಔಟಾಗದೆ 39 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್) ಉತ್ತಮ ಆಟವಾಡಿ ಗೆಲುವಿಗೆ ಪ್ರಮುಖ ಕಾರಣರಾದರು.
ಸಿಪಿಎಲ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಫ್ರಾಂಚೈಸಿಗೆ ಇದು ಮೊದಲ ಪ್ರಶಸ್ತಿಯಾಗಿದೆ. 2013ರಲ್ಲಿ ಸಿಪಿಎಲ್ ಪ್ರವೇಶಿಸಿದ್ದ ಸೇಂಟ್ ಲೂಸಿಯಾ ಅಂತಿಮವಾಗಿ ಟ್ರೋಫಿ ಗೆದ್ದುಕೊಂಡಿದೆ. ಇದರಿಂದ ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಈ ಮೂಲಕ ಪ್ರೀತಿ ಝಿಂಟಾ ಕನಸು ನನಸಾಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಪ್ರೀತಿ ಝಿಂಟಾ ಮಾತ್ರವಲ್ಲದೆ, ನೆಸ್ ವಾಡಿಯಾ, ಮೋಹಿತ್ ಬುಮ್ರಾನ್ ಮತ್ತು ಕರಣ್ ಪಾಲ್ ಕೂಡ ಸೇಂಟ್ ಲೂಸಿಯಾ ಫ್ರಾಂಚೈಸಿಯ ಮಾಲೀಕರಾಗಿದ್ದಾರೆ. ಐಪಿಎಲ್‌ನಲ್ಲೂ ಪಂಜಾಬ್ ಕಿಂಗ್ಸ್ ಕಪ್ ಗೆಲ್ಲಬೇಕು ಎಂದು ಪ್ರೀತಿ ಝಿಂಟಾ ಬಯಸಿದ್ದಾರೆ. ಈ ಒಂದು ನೋವು ಅವರಿಗೆ ಕಾಡುತ್ತಲೇ ಇದೆ. ಐಪಿಎಲ್ ಕಪ್ ಗೆಲ್ಲುವುದಕ್ಕೆ ಕಾಲ ಯಾವಾಗ ಕೂಡಿಬರುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)