

ಡೆಹ್ರಾಡೂನ್: ಭೂಮಿಯ ಮೇಲೆ ಕೇವಲ 1600 ಅಡಿ ಎತ್ತರದಲ್ಲಿ ಕಾಣಿಸಿಕೊಳ್ಳುವ ರಾಷ್ಟ್ರಪಕ್ಷಿ ನವಿಲು ( Peacock ) ಇದೇ ಮೊದಲ ಬಾರಿಗೆ ಬರೋಬ್ಬರಿ 6500 ಅಡಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದು ಪರಿಸರ ಬದಲಾವಣೆಯ ಸಂಕೇತ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.
ನವಿಲುಗಳು ಸಾಮಾನ್ಯವಾಗಿ ತಗ್ಗು ಪ್ರದೇಶಗಳಲ್ಲಿ ಅಥವಾ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಅತಿ ಎತ್ತರದ ಪ್ರದೇಶಗಳಲ್ಲಿ ಇದು ಕಾಣಿಸಿಕೊಳ್ಳುವುದಿಲ್ಲ. ಎತ್ತರ ಹೆಚ್ಚಾದಂತೆ ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆ ಆಗುವುದರಿಂದ ನವಿಲುಗಳು ಎತ್ತರ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ, ನವಿಲುಗಳು ಎತ್ತರದಲ್ಲಿ ಹಾರಾಡಲು ಕೂಡ ಸಾಧ್ಯವಿಲ್ಲ. ಆದರೆ, ಅತಿ ಎತ್ತರದ ಹಿಮಾಲಯ ಪ್ರದೇಶದಲ್ಲಿ ನವಿಲು ಕಾಣಿಸಿಕೊಂಡಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಹಿಮಾಲಯದಲ್ಲಿನ ಪರಿಸರ ಬದಲಾವಣೆಯ ಪರಿಣಾಮವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಎರಡು ಬಾರಿ ನವಿಲು ಕಾಣಿಸಿಕೊಂಡಿದೆ. ಕಳೆದ ಏಪ್ರಿಲ್ನಲ್ಲಿ ಕಾಫ್ಲಿಗೈರ್ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಅಕ್ಟೋಬರ್ 5 ರಂದು ಕಥಾಯತ್ಬಾರಾ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಇಷ್ಟು ಎತ್ತರದಲ್ಲಿ ನವಿಲನ್ನು ನೋಡುವುದೇ ಅಚ್ಚರಿಯಾಗಿದ್ದು, ಕಾಡುಪ್ರಾಣಿಗಳ ವಲಸೆಯ ಸಂಕೇತವಾಗಿರಬಹುದು ಎನ್ನುತ್ತಾರೆ ತಜ್ಞರು.
ಸಾಮಾನ್ಯವಾಗಿ 1,600 ಅಡಿ ಎತ್ತರದಲ್ಲಿ ಕಂಡುಬರುವ ನವಿಲು 6,500 ಅಡಿ ಎತ್ತರದಲ್ಲಿ ಕಾಣಿಸಿಕೊಂಡಿರುವುದು ಆಶ್ಚರ್ಯಕರವಾಗಿದೆ. ಪರಿಸರ ಬದಲಾವಣೆಗಳಿಂದಾಗಿ ವನ್ಯಜೀವಿಗಳ ವಲಸೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ ಎಂದು ಬಾಗೇಶ್ವರದ ಅರಣ್ಯ ಅಧಿಕಾರಿ ಧ್ಯಾನ್ ಸಿಂಗ್ ಕರಾಯತ್ ಅವರು ಹೇಳಿದ್ದಾರೆ.
ಭಾರತೀಯ ವನ್ಯಜೀವಿ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಸುರೇಶ್ ಕುಮಾರ್ ಮಾತನಾಡಿ, ಗುಡ್ಡಗಾಡು ಪ್ರದೇಶಗಳಲ್ಲಿ ಮೊದಲಿನಷ್ಟು ಚಳಿ ಇಲ್ಲ. ಆದ್ದರಿಂದ, ಪರ್ವತಗಳು ಅವುಗಳಿಗೆ ಸೂಕ್ತವಾದ ಹವಾಮಾನವನ್ನು ಹೊಂದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪರ್ವತಗಳ ಎತ್ತರದ ಪ್ರದೇಶಗಳಲ್ಲಿ ಕೃಷಿ ಮತ್ತು ಮಾನವ ವಸಾಹತುಗಳ ವಿಸ್ತರಣೆಯಂತಹ ಹೆಚ್ಚಿದ ಮಾನವ ಚಟುವಟಿಕೆಯು ಹೆಚ್ಚಿನ ಎತ್ತರದಲ್ಲಿ ಬೆಚ್ಚಗಿನ ಪರಿಸ್ಥಿತಿಗಳಿಗೆ ಕಾರಣವಾಗಿದೆ. ಇದು ನವಿಲಿನ ಈ ಎತ್ತರದ ವಲಸೆಗೆ ಕಾರಣವಾಗಿರಬಹುದು. ಆದರೆ ಇದು ಕಾಲೋಚಿತ ಬದಲಾವಣೆಯೂ ಆಗಿರಬಹುದು. ಚಳಿಗಾಲದ ಆರಂಭವಾದರೆ, ಬೆಟ್ಟಗಳಲ್ಲಿ ತುಂಬಾ ತಂಪಾಗುತ್ತದೆ ಮತ್ತು ತಗ್ಗು ಪ್ರದೇಶದ ಹಕ್ಕಿ ತನ್ನ ಮೂಲ ಆವಾಸಸ್ಥಾನದ ಸ್ಥಿತಿಗೆ ಮರಳಬಹುದು ಎಂದು ಡಾ. ಸುರೇಶ್ ಕುಮಾರ್ ತಿಳಿಸಿದರು.
ಇಂತಹ ದೃಶ್ಯಗಳು ಹೆಚ್ಚಾಗಿ ಕಂಡುಬಂದರೆ, ಅದು ಖಂಡಿತವಾಗಿಯೂ ನವಿಲುಗಳ ವಾಸಸ್ಥಾನವನ್ನು ಬದಲಾಯಿಸುವ ಸಾಮಾನ್ಯ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸುರೇಶ್ ಕುಮಾರ್ ಹೇಳಿದರು. (ಏಜೆನ್ಸೀಸ್)