

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್(Rahul Dravid) ಎಂಟರಿಂದ ಒಂಬತ್ತು ವರ್ಷಗಳ ನಂತರ ಐಪಿಎಲ್ ಹರಾಜಿನ ಭಾಗವಾಗಿದ್ದೇನೆ. ಐಪಿಎಲ್ 2025ರ ಮೆಗಾ ಹರಾಜಿನ ಭಾಗವಾಗಲು ಸ್ವಲ್ಪ ಆತಂಕವಿದೆ, ಆದರೆ ಅದರ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ನಂತರ ಐಪಿಎಲ್ 2025ರ ಸೀಸನ್ಗೆ ಮುಂಚಿತವಾಗಿ ರಾಜಸ್ಥಾನ ರಾಯಲ್ಸ್ಗೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಐಪಿಎಲ್ 2025ರ ಆಟಗಾರರ ಹರಾಜು ನವೆಂಬರ್ 24 ಮತ್ತು 25 (ಭಾನುವಾರ ಮತ್ತು ಸೋಮವಾರ) ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದಕ್ಕೆ ದ್ರಾವಿಡ್ ಸಿದ್ಧರಾಗಿದ್ದು ಅವರು ರಾಜಸ್ಥಾನದ ತಂತ್ರದ ಪ್ರಮುಖ ಭಾಗವಾಗಿದ್ದಾರೆ. ಹರಾಜಿಗೂ ಮುನ್ನ ರಾಜಸ್ಥಾನ ಆರು ಆಟಗಾರರನ್ನು ಉಳಿಸಿಕೊಂಡಿತ್ತು. ಆದರೆ ಒಂದೇ ಒಂದು ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಲಭ್ಯವಿಲ್ಲ.
ಸುಮಾರು ಎಂಟು-ಒಂಬತ್ತು ವರ್ಷಗಳಿಂದ ನಾನು ಐಪಿಎಲ್ ಹರಾಜಿನ ಭಾಗವಾಗಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. ನಾನು 2008ರಲ್ಲಿ ಮೊದಲ ಬಾರಿಗೆ ಹರಾಜಿನ ಭಾಗವಾಗಿದ್ದೆ. ಆ ಸಮಯದಲ್ಲಿ ನನಗೆ ತುಂಬಾ ವಿಚಿತ್ರ ಅನಿಸಿತು. ಇಷ್ಟು ವರ್ಷಗಳಲ್ಲಿ ತಂಡಗಳು ಹೆಚ್ಚು ಸಂಘಟಿತವಾಗಿವೆ ಹಾಗೂ ಸಿದ್ಧವಾಗಿವೆ ಮತ್ತು ಪ್ರಕ್ರಿಯೆಯು ಹೆಚ್ಚು ವೃತ್ತಿಪರವಾಗಿದೆ. ಆತಂಕವಿದೆ ಎಂದು ನಾನು ಹೇಳುವುದಿಲ್ಲವಾದರೂ, ನೀವು ತಂಡವನ್ನು ನಿರ್ಮಿಸುತ್ತಿರುವುದರಿಂದ ಖಂಡಿತವಾಗಿಯೂ ಉತ್ಸಾಹವಿದೆ. ನಾವು ಬಲವಾದ ಕೋರ್ ತಂಡವನ್ನು ಉಳಿಸಿಕೊಂಡಿದ್ದೇವೆ. ಆದ್ದರಿಂದ ನಾವು ಸ್ವಲ್ಪ ಆರಾಮದಾಯಕವಾಗಿದ್ದೇವೆ ಎಂದು ಹೇಳಿದ್ದಾರೆ.
ರಾಹುಲ್ ದ್ರಾವಿಡ್ 2015ರ ನಂತರ ಮತ್ತೆ ರಾಜಸ್ಥಾನ ರಾಯಲ್ಸ್ ಜತೆ ಸೇರಿಕೊಂಡಿದ್ದಾರೆ. 2012 ಮತ್ತು 2013 ರಲ್ಲಿ ಈ ಫ್ರಾಂಚೈಸಿಯನ್ನು ಮುನ್ನಡೆಸಿದರು. 2014 ಮತ್ತು 2015ರಲ್ಲಿ ತಂಡದ ಮಾರ್ಗದರ್ಶಕ ಮತ್ತು ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಂತರ ಅವರು ದೆಹಲಿ ಕ್ಯಾಪಿಟಲ್ಸ್ ಸೇರಿದರು. ದ್ರಾವಿಡ್ ಮುಖ್ಯ ಕೋಚ್ ಆಗಿ ನಾಲ್ಕು ಋತುಗಳನ್ನು ಕಳೆದರು ಮತ್ತು 2019ರಲ್ಲಿ ಅವರು ಭಾರತ ಅಂಡರ್-19 ತಂಡದ ಕೋಚ್ ಆಗಿದ್ದರು.
ರಾಜಸ್ಥಾನ ರಾಯಲ್ಸ್ಗೆ ಮರಳಲು ನನಗೆ ತುಂಬಾ ಸಂತೋಷವಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ. ನಾನು ಮೂರು ವರ್ಷಗಳ ಕಾಲ ಈ ತಂಡಕ್ಕಾಗಿ ಆಡಿದ್ದೇನೆ. ಮತ್ತು ಈ ತಂಡದಲ್ಲಿ ಕೆಲವು ವರ್ಷಗಳನ್ನು ಮೆಂಟರ್ ಮತ್ತು ಕೋಚ್ ಆಗಿ ಕಳೆದಿದ್ದೇನೆ. ಹಳೆಯ ಸ್ನೇಹಿತರನ್ನು ಮತ್ತೆ ಭೇಟಿ ಮಾಡಿ ತಂಡದ ಅಭಿವೃದ್ಧಿಗೆ ಕೊಡುಗೆ ನೀಡಿರುವುದು ಸಂತಸ ತಂದಿದೆ. ಹರಾಜು, ಹೊಸ ಆಟಗಾರರ ಭೇಟಿ ಮತ್ತು ಐಪಿಎಲ್ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)