

ಟೀಂ ಇಂಡಿಯಾ 2024ರ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು. ಇದರೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿಯೂ ಕೊನೆಗೊಂಡಿತು. ಜೂನ್‌ನಲ್ಲಿ ಬಾರ್ಬಡೋಸ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದ ನಂತರ ವಿರಾಮ ತೆಗೆದುಕೊಂಡ ದ್ರಾವಿಡ್ ಈಗ ಐಪಿಎಲ್ಗೆ ಮರಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ದ್ರಾವಿಡ್ ನೇಮಕಗೊಂಡಿದ್ದಾರೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಐಪಿಎಲ್ 2025 ಹರಾಜಿನ ಮೊದಲು ರಾಹುಲ್ ದ್ರಾವಿಡ್ ಅವರನ್ನು ರಾಜಸ್ಥಾನ್ ರಾಯಲ್ಸ್ ಅವರ ತಂಡದ ಮುಖ್ಯ ತರಬೇತುದಾರರಾಗಿ ನೇಮಿಸಲಾಗಿದೆ. ಈ ವಿಚಾರವನ್ನು ಫ್ರಾಂಚೈಸಿ ಶುಕ್ರವಾರ(ಸೆಪ್ಟೆಂಬರ್ 6) ಪ್ರಕಟಿಸಿದೆ. ರಾಹುಲ್ ದ್ರಾವಿಡ್ ಅವರು ಪಿಂಕ್ ಜೆರ್ಸಿಯೊಂದಿಗಿರುವ ಫೋಟೋವನ್ನು ರಾಜಸ್ಥಾನ್ ರಾಯಲ್ಸ್‌ನ ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತದ ದಂತಕಥೆ ವಿಶ್ವಕಪ್ ವಿಜೇತ ಕೋಚ್ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್‌ಗೆ ಪುನರಾಗಮನವನ್ನು ಮಾಡಲು ಸಿದ್ಧರಾಗಿದ್ದಾರೆ! ಎಂಬ ಶೀರ್ಷಿಕೆಯೋಂದಿಗೆ ಪೋಸ್ಟ್ ಮಾಡಿದ್ದಾರೆ. ಆ ಫೋಟೋದಲ್ಲಿ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್‌ನ ಸಿಇಒ ಜೇಕ್ ಲಶ್ ಮೆಕ್‌ಕ್ರಂ ಅವರು ದ್ರಾವಿಡ್ ಅವರಿಗೆ ಪಿಂಕ್ ಕಲರ್ ನೀಡುತ್ತಿರುವುದನ್ನು ನೋಡಬಹುದು.
ಭಾರತ ತಂಡದೊಂದಿಗೆ ದ್ರಾವಿಡ್ ಅವರ ಅಸಾಮಾನ್ಯ ತರಬೇತಿ ಪ್ರತಿಭೆಯನ್ನು ನಾವು ನೋಡಿದ್ದೇವೆ. ಅವರು ನಮ್ಮ ತಂಡದೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದಾರೆ. ಆಟ ಮತ್ತು ತಂಡದ ಬಗ್ಗೆ ಅವರ ಉತ್ಸಾಹವನ್ನು ನಾವು ನೋಡಿದ್ದೇವೆ ಎಂದು ಸಿಇಒ ಜೇಕ್ ಲಶ್ ಮೆಕ್‌ಕ್ರಂ ಹೇಳಿದ್ದಾರೆ. ಈ ಹಿಂದೆ ಈ ತಂಡದ ಮುಖ್ಯ ಕೋಚ್ ಆಗಿದ್ದ ಕುಮಾರ್ ಸಂಗಕ್ಕಾರ ಅವರು ಈಗ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ದ್ರಾವಿಡ್ 2015ರ ನಂತರ ಅಂದರೆ 9 ವರ್ಷಗಳ ನಂತರ ಮತ್ತೆ ಈ ತಂಡವನ್ನು ಸೇರಿಕೊಂಡಿದ್ದಾರೆ. (ಎಜೆನ್ಸೀಸ್)