13 Movie Review ; ಭಾವೈಕ್ಯತೆ ಸಾರುವ ಭಾವೋದ್ವೇಗದ ಕಥೆ

13 (2)
Published on

| ಹರ್ಷವರ್ಧನ್ ಬ್ಯಾಡನೂರು

ಚಿತ್ರ : 13
ನಿರ್ದೇಶನ : ಕೆ. ನರೇಂದ್ರ ಬಾಬು
ನಿರ್ಮಾಣ : ಸಂಪತ್ ಮತ್ತು ಮಂಜುನಾಥ್
ತಾರಾಗಣ : ರಾಘವೇಂದ್ರ ರಾಜಕುಮಾರ್, ಶೃತಿ, ದಿಲೀಪ್ ಪೈ, ಪ್ರಮೋದ್ ಶೆಟ್ಟಿ, ಸೂರಜ್, ಲೋಕೇಶ್ ಮುಂತಾದವರು.

ಮೋಹನ್ (ರಾಘವೇಂದ್ರ ರಾಜಕುಮಾರ್) ಮತ್ತು ಸಾಹಿರ ಭಾನು (ಶೃತಿ), ಹಿಂದೂ ಪತಿ - ಮುಸ್ಲಿಂ ಪತ್ನಿ. ಧರ್ಮಗಳನ್ನು ಮೀರಿದ ಪ್ರೀತಿ, ಮನೆಯವರನ್ನು ವಿರೋಧಿಸಿ 10 ವರ್ಷಗಳ ಹಿಂದೆ ಮದುವೆಯಾಗಿರುತ್ತಾರೆ. ಕೊಟ್ಟಿಗೆಹಾರದಲ್ಲಿ ಮೋಹನ್ ಗುಜರಿ ಅಂಗಡಿ ಇಟ್ಟುಕೊಂಡಿದ್ದರೆ, ಸಾಹಿರಾ ಟೀ ಅಂಗಡಿ ನಡೆಸುತ್ತಿರುತ್ತಾಳೆ. ಅಕ್ಕಪಕ್ಕದಲ್ಲಿರುವ ಈ ಅಂಗಡಿಗಳಿಗೆ ‘ರಾಮ್-ರಹೀಮ್’ ಎಂದು ಹೆಸರು. ತಾವಾಯಿತು, ತಮ್ಮ ಜೀವನವಾಯಿತು ಎಂದು ಆರಾಮಾಗಿರುವ ಈ ದಂಪತಿಗೆ ಕೋಟಿಗಟ್ಟಲೆ ಹಣ ಸಿಗುತ್ತದೆ. ಅಲ್ಲಿಂದ ಸುಖಕ್ಕಿಂತ ಕಷ್ಟಗಳೇ ಹೆಚ್ಚಾಗುತ್ತವೆ. ಜತೆಗೆ ಮೋಹನ್ ಹಿನ್ನೆಲೆಯ ಬಗ್ಗೆಯೂ ತಿಳಿಯುತ್ತದೆ. ಆ ಹಣ ಯಾರದು? ಯಾರ ಬಳಿ ಇತ್ತು? ಇವರಿಗೆ ಹೇಗೆ ಸಿಕ್ಕಿತು? ಹೀಗೆ ಚಿತ್ರದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಆದರೆ, ಮುಂದೇನು? ಎನ್ನುವುದಕ್ಕೆ ‘ಭಾಗ 2’ರಲ್ಲಿ ಲಿಂಕ್ ಕೊಟ್ಟಿದ್ದಾರೆ ನಿರ್ದೇಶಕ ನರೇಂದ್ರ ಬಾಬು.

ಧರ್ಮವನ್ನೂ ಮೀರಿದ ಪ್ರೀತಿಯ ಸೊಬಗನ್ನು ತಿಳಿಸುವ ಕಥೆಯಿದು. ಜತೆಗೆ ಯಾರದ್ದೋ ಹಣಕ್ಕೆ ಎಲ್ಲರೂ ಪಾಲುದಾರರಾಗ ಬಯಸುವ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳಿವೆ. ಅದನ್ನು ಉತ್ತಮ ರೀತಿಯಲ್ಲಿ ಬೆಸೆದು ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದಿಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಕೆಲವೆಡೆ ಸಡನ್ ಟ್ವಿಸ್ಟ್‌ಗಳಿಂದ ಕುತೂಹಲ ಮೂಡಿಸುವ ಚಿತ್ರ, ಕೆಲವೆಡೆ ಇದೆಲ್ಲಾ ಬೇಕಾ? ಅಂತನ್ನಿಸಿದರೂ ಆಶ್ಚರ್ಯವಿಲ್ಲ. ಆದರೆ, 124 ನಿಮಿಷಗಳ ಚಿತ್ರವಾದ ಕಾರಣ ಹೆಚ್ಚು ಬೋರಾಗದೇ ನೋಡಿಸಿಕೊಂಡು ಹೋಗುತ್ತದೆ. ಜತೆಗೆ ಸೀಕ್ವಲ್‌ನಲ್ಲಿ ಏನಾಗಬಹುದು ಎಂಬ ಕುತೂಹಲ ಉಳಿಸಿಕೊಳ್ಳುವಲ್ಲಿ ನರೇಂದ್ರ ಗೆದ್ದಿದ್ದಾರೆ. ಶೋಗನ್ ಬಾಬು ಸಂಗೀತ, ಅಜಯ್ ಮಂಜು ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿವೆ.


ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆನ್ನುವ ಪತಿ ಮೋಹನ್ ಪಾತ್ರದಲ್ಲಿ ರಾಘಣ್ಣ ನ್ಯಾಚುರಲ್. ಹಾಸಿಗೆಯನ್ನೇ ದೊಡ್ಡದು ಹೊಲಿಸಿಕೊಳ್ಳೋಣ ಎನ್ನುವ ಹೈಪರ್ ಹೆಂಡತಿ ಸಾಹಿರಾ ಭಾನು ಆಗಿ ಶೃತಿ ಅಭಿನಯ ಚಿತ್ರದ ಹೈಲೈಟ್. ವಿಭಿನ್ನ ಪಾತ್ರದಲ್ಲಿ, ವಿಶೇಷ ಸಂಭಾಷಣೆಯ ಮೂಲಕ ಮಿಂಚಿದ್ದಾರೆ ನಟಿ ಶೃತಿ. ಹಣದ ಬೆನ್ನತ್ತುವ ಭ್ರಷ್ಟ ಸಬ್ ಇನ್ಸ್‌ಪೆಕ್ಟರ್ ಸಾವಂತ್ ಕುಮಾರ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ದುಷ್ಟನಗೆ ಬೀರಿದ್ದಾರೆ. ಅವರ ಸೈಡ್‌ಕಿಕ್ ಕಾನ್ಸ್‌ಟೆಬಲ್ ಮೈಲಾರಿಯಾಗಿ ಲೋಕೇಶ್ ಮತ್ತು ಕುಡುಕ ಸಿದ್ದನ ಪಾತ್ರದಲ್ಲಿ ಸೂರಜ್ ಅಲ್ಲಲ್ಲಿ ನಗಿಸುತ್ತಾರೆ. ಪಂಚರ್ ಶಾಪ್ ಮುಸ್ತಾಾ ಪಾತ್ರದಲ್ಲಿ ನಿರ್ದೇಶಕ ನರೇಂದ್ರ ಬಾಬು, ಜಾನ್ ಆಗಿ ದಿಲೀಪ್ ಪೈ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net