

ಕೆಲವು ದಿನಗಳ ಹಿಂದಷ್ಟೇ ಪವನ್ ಕಲ್ಯಾಣ್ ಅಭಿನಯಿಸುತ್ತಿರುವ, ಶ್ರೀಲೀಲಾ ನಾಯಕಿಯಾಗಿರುವ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಎರಡನೇ ನಾಯಕಿಯಾಗಿ ಸಾಕ್ಷಿ ವೈದ್ಯ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದು ನಿಜ ಎಂದು ಖುದ್ದು ಸಾಕ್ಷಿ ಸಹ ಇತ್ತೀಚೆಗಷ್ಟೆ ಒಪ್ಪಿಕೊಂಡಿದ್ದರು. ಆದರೆ, ಇದೀಗ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ‘ಉಸ್ತಾದ್…’ ಚಿತ್ರದಿಂದ ಸಾಕ್ಷಿ ವೈದ್ಯಗೆ ಗೇಟ್‌ಪಾಸ್ ನೀಡಲಾಗಿದೆಯಂತೆ. ಅವರು ನಟಿಸಿರುವ ಎರಡು ಚಿತ್ರಗಳೂ ಬಾಕ್ಸಾಫೀಸಿನಲ್ಲಿ ಸೋತಿದ್ದೇ ಅದಕ್ಕೆ ಕಾರಣ ಎನ್ನಲಾಗಿದೆ.
ಹೌದು, ಮಹಾರಾಷ್ಟ್ರ ಮೂಲದ ಸಾಕ್ಷಿ, ಅಖಿಲ್ ಅಕ್ಕಿನೇನಿ ನಾಯಕನಾಗಿದ್ದ ‘ಏಜೆಂಟ್’ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಕಳೆದ ಏಪ್ರಿಲ್‌ನಲ್ಲಿ ರಿಲೀಸ್ ಆದ ಈ ಚಿತ್ರ ಗಳಿಕೆ ವಿಷಯದಲ್ಲಿ ನಿರ್ಮಾಪಕರ ಕೈಹಿಡಿಯಲಿಲ್ಲ. ಆಗಸ್ಟ್‌ನಲ್ಲಿ ತೆರೆಗೆ ಬಂದ ‘ಗಾಂಢೀವಧಾರಿ ಅರ್ಜುನ’ ಚಿತ್ರದಲ್ಲೂ ಸಾಕ್ಷಿ, ವರುಣ್ ತೇಜ್‌ಗೆ ಜೋಡಿಯಾಗಿದ್ದರು. ಈ ಸಿನಿಮಾ ಕೂಡ ಬಾಕ್ಸಾಫೀಸಿನಲ್ಲಿ ಸದ್ದು ಮಾಡಲಿಲ್ಲ.
ಹೀಗೆ ನಟಿಸಿದ ಎರಡು ಚಿತ್ರಗಳೂ ಸೋತ ಕಾರಣ, ಹರೀಶ್ ಶಂಕರ್ ನಿರ್ದೇಶಿಸುತ್ತಿರುವ ‘ಉಸ್ತಾದ್…’ ಚಿತ್ರತಂಡಕ್ಕೆ ಸಾಕ್ಷಿ ವೈದ್ಯ ಬೇಕೋ? ಬೇಡವೋ? ಎಂಬ ದ್ವಂದ್ವ ಕಾಡುತ್ತಿದೆಯಂತೆ. ಹೀಗಾಗಿಯೇ ಅವರಿಗೆ ಗೇಟ್‌ಪಾಸ್ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
-ಏಜೆನ್ಸೀಸ್