ಶಿಕ್ಷಣದ ಸುತ್ತ ‘ಬನ್-ಟೀ’; ಉದಯ್ ನಿರ್ದೇಶನದಲ್ಲಿ ಉಮೇಶ್ ಮತ್ತು ಶ್ರೀದೇವಿ

bun tea
Published on

ಬೆಂಗಳೂರು: ಉದಯ್ ಕುಮಾರ್ ನಿರ್ದೇಶಿಸುತ್ತಿರುವ, ಉಮೇಶ್ ಹಾಗೂ ಶ್ರೀದೇವಿ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ‘ಬನ್-ಟೀ’. ಶಿಕ್ಷಣ ವ್ಯವಸ್ಥೆಯ ಕುರಿತಾದ ಕಥಾಹಂದರವನ್ನು ಹೊಂದಿರುವ ಚಿತ್ರವಿದು.

ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಇದೇ 22ಕ್ಕೆ ಚಿತ್ರ ರಿಲೀಸ್ ಆಗಲಿದೆ. ನಾಯಕ ಉಮೇಶ್, ‘ನಾನು ಮೂಲತಃ ವಕೀಲ. ಈ ಸಿನಿಮಾದ ಕಥೆ ಹಾಗೂ ಇದರಲ್ಲಿರುವ ಸಂದೇಶ ಇಷ್ಟವಾಗಿ ಪಾತ್ರ ಮಾಡಲು ಒಪ್ಪಿಕೊಂಡೆ. ನನ್ನ ಪಾತ್ರ ಚಿತ್ರದುದ್ದಕ್ಕೂ ಸ್ಲಂನಲ್ಲಿಯೇ ಇರುತ್ತದೆ’ ಎಂದು ಹೇಳಿಕೊಂಡರು. ಉಮೇಶ್‌ಗೆ ನಾಯಕಿಯಾಗಿರುವ ಶ್ರೀವಿದ್ಯಾ, ‘ನಾನು ಸ್ಲಂ ಮಹಿಳೆಯ ಪಾತ್ರವನ್ನು ಮಾಡುತ್ತಿದ್ದೇನೆ. ಚಿತ್ರೀಕರಣವನ್ನು ಸ್ಲಂನಲ್ಲೇ ಮಾಡಿದ್ದು, ಆ ಜೀವನದ ಹೊಸ ಅನುಭವ ಸಿಕ್ಕಿತು’ ಎಂದರು. ನಿರ್ದೇಶಕ ಉದಯ್, ‘ನನ್ನ ಗೆಳೆಯನ ಜೀವನದಲ್ಲಿ ನಡೆದ ನೈಜ ಘಟನೆ ಇದು. ಶಿಕ್ಷಣ ಎನ್ನುವುದು ಯಾಕೆ ಕಮರ್ಷಿಯಲ್ ಆಗಿದೆ? ಜೀವನದಲ್ಲಿ ಮಾರ್ಕ್ಸ್ ಮಾತ್ರ ಮುಖ್ಯವೇ? ಹೀಗೆ ಈಗಿನ ಶಿಕ್ಷಣ ಪದ್ಧತಿಯ ಹಲವು ಅಂಶಗಳ ಕುರಿತ ಸಿನಿಮಾ. ಸೆಟ್ ಹಾಕದೇ, ಸ್ಲಂ ಹಾಗೂ ಮಾರುಕಟ್ಟೆಯಲ್ಲಿ ನೈಜವಾಗಿ ಶೂಟಿಂಗ್ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಬಂಟಿ’ ಪಾತ್ರದಲ್ಲಿ ಬಾಲನಟ ಮೌರ್ಯ ನಟಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ. ಪ್ರದ್ಯೋತ್ತಮ್ ಹಿನ್ನೆಲೆ ಸಂಗೀತ, ರಾಜಾರಾವ್ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net