

ಜೈಪುರ: ಪ್ರತಿನಿತ್ಯವು ನನ್ನ ಹಂಡತಿ ನನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಾಳೆ. ಈ ಸಂಕಷ್ಟದಿಂದ ನನ್ನನ್ನು ಪಾರು ಮಾಡಿ ಎಂದು ಶಾಲಾ ಪ್ರಾಂಶುಪಾಲರೊಬ್ಬರು ನ್ಯಾಯಾಲಯದ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಅಲ್ವಾರ್ನಲ್ಲಿ ನಡೆದಿದೆ.
ಸಂತ್ರಸ್ತ ಪ್ರಾಂಶುಪಾಲರ ಹೆಸರು ಅಜಿತ್ ಯಾದವ್. ತನ್ನ ಹೆಂಡತಿ ದೌರ್ಜನ್ಯ ಎಸಗುವ ಸಿಸಿಟಿವಿ ವಿಡಿಯೋ ಸಮೇತ ದೂರು ದಾಖಲಿಸಿದ್ದು, ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಜಿತ್ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ರಕ್ಷಣೆ ಒದಗಿಸುವಂತೆ ಆದೇಶಿಸಿದೆ.
ಅಂದಹಾಗೆ ಅಜಿತ್ ಹರಿಯಾಣದ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮದುವೆಯಾಗಿ 7 ವರ್ಷಗಳಾಗಿದ್ದು, ದಂಪತಿಗೆ 6 ವರ್ಷದ ಒಂದು ಗಂಡು ಮಗುವಿದೆ. ಸದ್ಯ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಕಾರಣವಿಲ್ಲದೆ ನನ್ನ ಮೇಲೆ ಹಲ್ಲೆ ಮಾಡಿ, ಬಟ್ಟೆಯನ್ನೆಲ್ಲಾ ಚಿಂದಿ ಮಾಡಿದ್ದಾಳೆ. ದಿನಬೆಳಗಾದರೂ ನನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುತ್ತಾಳೆ. ಕ್ರಿಕೆಟ್ ಬ್ಯಾಟ್, ಐರನ್ ಪ್ಯಾನ್ ಮತ್ತು ಇತರೆ ಪಾತ್ರೆಗಳಿಂದ ಬಾರಿಸುತ್ತಿರುತ್ತಾಳೆ. ಏಕೆ ಹೊಡೆಯುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದರೆ, ಅದಕ್ಕೆ ಉತ್ತರವಿಲ್ಲ. ಆಕೆಯ ಕಾಟ ತಡೆಯಲು ಆಗುತ್ತಿಲ್ಲ ಎಂದು ದೂರಿನಲ್ಲಿ ಅಜಿತ್ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ರಾಜಸ್ಥಾನ ಪೊಲೀಸರು ತನಿಖೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)