ಆರ್‌ಸಿಬಿ ಪರ ಆಡಲು ಮದುವೆ ಮುಂದೂಡಿದ್ದ ರಜತ್ ಪಾಟಿದಾರ್!

rcb patidar wed web
Published on

ನವದೆಹಲಿ: ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆರ್‌ಸಿಬಿ ತಂಡದ ಗೆಲುವಿನ ರೂವಾರಿ ಎನಿಸಿದವರು ಮಧ್ಯಪ್ರದೇಶದ 28 ವರ್ಷದ ಬ್ಯಾಟರ್ ರಜತ್ ಪಾಟಿದಾರ್. ಅವರಿಗೆ ಅಚಾನಕ್ ಆಗಿ ಐಪಿಎಲ್‌ನಲ್ಲಿ ಆಡುವ ಅವಕಾಶ ಒಲಿದು ಬಾರದಿದ್ದರೆ ಇಷ್ಟೊತ್ತಿಗೆ ಅವರು ಆರ್‌ಸಿಬಿ ಪರ ಆಡುತ್ತಿರಲಿಲ್ಲ, ಹನಿಮೂನ್‌ನಲ್ಲಿರುತ್ತಿದ್ದರು!

ಹೌದು, ಕಳೆದ ಮೇ 9ರಂದು ರಜತ್ ಪಾಟಿದಾರ್ ವಿವಾಹ ನಿಗದಿಯಾಗಿತ್ತು. ಇಂದೋರ್‌ನಲ್ಲಿ ಹೋಟೆಲ್ ಕೂಡ ಬುಕ್ ಮಾಡಲಾಗಿತ್ತು. ಆದರೆ, ಆರ್‌ಸಿಬಿ ತಂಡದ ಆಟಗಾರ ಲವ್ನಿತ್ ಸಿಸೋಡಿಯಾ ಗಾಯಗೊಂಡಾಗ ಪಾಟಿದಾರ್‌ಗೆ ದಿಢೀರನೆ ಐಪಿಎಲ್‌ನಲ್ಲಿ ಆಡುವ ಅವಕಾಶ ಒಲಿದುಬಂದಿತ್ತು. ಇದರಿಂದಾಗಿ ಅವರ ಮದುವೆಯನ್ನು ಮುಂದೂಡಲಾಗಿತ್ತು. ಸರಳವಾಗಿ ವಿವಾಹ ನಡೆಸಲು ಬಯಸಿದ್ದರಿಂದ ಆಮಂತ್ರಣ ಪತ್ರಿಕೆ ಮುದ್ರಿಸಿರಲಿಲ್ಲ ಎಂದು ತಂದೆ ಮನೋಹರ್ ಪಾಟಿದಾರ್ ತಿಳಿಸಿದ್ದಾರೆ.

ಕಳೆದ ಮೆಗಾ ಹರಾಜಿನಲ್ಲಿ ಅವರು 20 ಲಕ್ಷ ರೂ. ಮೂಲಬೆಲೆಯೊಂದಿಗೆ ಪಾಲ್ಗೊಂಡಿದ್ದರೂ, ಯಾವುದೇ ತಂಡ ಅವರನ್ನು ಕೊಂಡುಕೊಳ್ಳಲು ಮುಂದೆ ಬಂದಿರಲಿಲ್ಲ. ಐಪಿಎಲ್ ಬೆನ್ನಲ್ಲೇ ರಣಜಿ ಟ್ರೋಫಿ ನಾಕೌಟ್‌ನಲ್ಲಿ ಮಧ್ಯಪ್ರದೇಶ ಪರ ಆಡಲಿರುವ ಪಾಟಿದಾರ್, ನಂತರವಷ್ಟೇ ವಿವಾಹವಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net