More

    ಡಿಜಿಟಲ್ ಸಾಲದ ಆಪತ್ತು: ಲೋನ್ ಕೊಟ್ಟು ಜೀವ ಹಿಂಡುವ ಅನಧಿಕೃತ ಆ್ಯಪ್​​ಗಳು

    ವಿಜಯವಾಣಿ ವಿಶೇಷ ಬೆಂಗಳೂರು: ಕೆಲವೇ ನಿಮಿಷಗಳಲ್ಲಿ ಸಾಲ ಕೊಡುವ ಡಿಜಿಟಲ್ ಆಪ್​ಗಳು ಜನರ ಜೀವಕ್ಕೆ ಆಪತ್ತಾಗಿ ಪರಿಣಮಿಸಿವೆ! ಅಂದಾಜು 600 ಅನಧಿಕೃತ ಲೋನ್ ಆಪ್​ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗುರುತಿಸಿದೆ. ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್​ನಿಂದ 200ಕ್ಕೂ ಅಧಿಕ ಆಪ್​ಗಳನ್ನು ತೆಗೆದು ಹಾಕಿದರೂ ಫೇಸ್​ಬುಕ್, ಇನ್​ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸಕ್ರಿಯವಾಗಿದ್ದು, ಸಾಲದ ಆಪತ್ತಿನ ಬಗ್ಗೆ ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.

    ಗೂಗಲ್ ಪ್ಲೇಸ್ಟೋರ್​ನಲ್ಲಿ ನೂರಾರು ಸಾಲದ ಅಫ್ಲಿಕೇಷನ್​ಗಳು ಬಳಕೆಯಲ್ಲಿವೆ. ಇದರಲ್ಲಿ ಬೆರಳೆಣಿಕೆಯಷ್ಟೇ ಆರ್​ಬಿಐ ಅನುಮೋದಿತ ಆಪ್​ಗಳಾಗಿದ್ದು, ಉಳಿದೆಲ್ಲವೂ ಅನಧಿಕೃತ. ಇಂತಹ ಆಪ್​ಗಳ ಮೂಲಕ ಸಾಲ ಪಡೆಯುವುದು ಅಪಾಯಕಾರಿ. ಇಂತಹ ಬೇನಾಮಿ ಆಪ್​ಗಳ ನಿರ್ವಾಹಕರು ಸಾಲಕ್ಕೆ ಹೆಚ್ಚಿನ ಬಡ್ಡಿದರ ವಿಧಿಸುವುದು, ಇಎಂಐ ಪಾವತಿಸದವರಿಗೆ ಕಿರುಕುಳ ನೀಡುವುದಷ್ಟೇ ಅಲ್ಲದೆ, ಬ್ಲಾ್ಯಕ್​ವೆುೕಲ್ ಮಾಡುವ ನೂರಾರು ಪ್ರಕರಣಗಳು ನಿತ್ಯ ಬೆಳಕಿಗೆ ಬರುತ್ತಿವೆ. ಆಪ್​ಗಳ ಸಾಲದ ಟಾರ್ಚರ್ ತಾಳಲಾರದೆ ಈಗಾಗಲೆ ಆತ್ಮಹತ್ಯೆ ಮಾಡಿಕೊಂಡಿರುವ ಹಲವಾರು ಪ್ರಕರಣಗಳು ವರದಿಯಾಗಿವೆ.

    ಅಂದಾಜು 600 ಅನಧಿಕೃತ ಲೋನ್ ಆಪ್​ಗಳಿರುವ ಬಗ್ಗೆ ಆರ್​ಬಿಐ ಮಾಹಿತಿ ನೀಡಿದೆ. 2020 ಜ.1ರಿಂದ 2021ರ ಮಾ.31ರವರೆಗೆ ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ 2,562 ದೂರುಗಳು ದಾಖಲಾಗಿವೆ. ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲಿ ಲೋನ್ ಆಪ್​ಗಳ ಟಾರ್ಚರ್ ಬಗ್ಗೆ ಹೆಚ್ಚು ದೂರುಗಳು ದಾಖಲಾಗಿದ್ದು, ಕರ್ನಾಟಕ ಸೇರಿ ಕೆಲವೆಡೆ ಸೈಬರ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಹತ್ತೇ ನಿಮಿಷದಲ್ಲಿ 1 ಲಕ್ಷ ರೂ. ಸಾಲ!: ಸ್ಮಾರ್ಟ್​ಫೋನ್ ಹೊಂದಿದ್ದರೆ ಈ ಅನಧಿಕೃತ ಲೋನ್ ಆಪ್​ಗಳ ಮೂಲಕ ಬರೀ 10 ನಿಮಿಷದಲ್ಲಿ 10 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸುವುದು, ಪಾನ್​ಕಾರ್ಡ್ ಸೇರಿ ಅವರು ಕೇಳುವ ದಾಖಲೆಗಳನ್ನು ಅಪ್​ಲೋಡ್ ಮಾಡಿದರೆ ಸಾಕು, ಪರಿಶೀಲನೆ ಪೂರ್ಣಗೊಳಿಸಿ ನಿಮ್ಮ ಖಾತೆಗೆ ಸಾಲದ ಹಣ ವರ್ಗಾವಣೆ ಮಾಡುತ್ತಾರೆ.

    6.17 ಕೋಟಿ ರೂ. ಜಪ್ತಿ ಮಾಡಿದ್ದ ಇಡಿ: ಸಾಲ ಮತ್ತು ಹೂಡಿಕೆಯ ಚೀನಾ ಆಪ್ ಕಂಪನಿಗಳ ಮತ್ತು ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೆಟ್​ನಲ್ಲಿದ್ದ 6.17 ಕೋಟಿ ರೂ.ಗಳನ್ನು ಜಾರಿ ನಿರ್ದೇಶನಾಲಯ ಇತ್ತೀಚೆಗೆ ಜಪ್ತಿ ಮಾಡಿದೆ. ಸಾಲ ಕೊಟ್ಟು ದುಬಾರಿ ಬಡ್ಡಿ ವಸೂಲಿ ಹಾಗೂ ಹೂಡಿಕೆ ಆಪ್​ಗಳ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಮತ್ತು ಮಾರತ್​ಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿವೆ. ಪೊಲೀಸರ ತನಿಖೆ ವೇಳೆ ಕೋಟ್ಯಂತರ ರೂ. ಅಕ್ರಮ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇ.ಡಿ ಪ್ರತ್ಯೇಕ ತನಿಖೆ ಕೈಗೊಂಡು ಹಣ ಜಪ್ತಿ ಮಾಡಿದ್ದು, ತನಿಖೆ ಮುಂದುವರಿದಿದೆ.

    ನಕಲಿ ಆ್ಯಪ್​ ಪತ್ತೆ ಹೇಗೆ?

    • ಸಾಲ ಕೊಡುವ ಸಂಸ್ಥೆ ಆರ್​ಬಿಐನಡಿ ನೋಂದಣಿ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು
    • ಆಪ್​ನ ರೇಟಿಂಗ್/ರಿವ್ಯೂ ನೋಡಿ. ಇತರರು ಹಂಚಿಕೊಂಡ ಅಭಿಪ್ರಾಯಗಳನ್ನು ಪರಿಶೀಲಿಸಿ
    • ಮೊಬೈಲ್​ನ ಗ್ಯಾಲರಿ ಹಾಗೂ ಕಾಂಟ್ಯಾಕ್ಟ್ ಲೀಸ್ಟ್ ಸಂಪರ್ಕಕ್ಕೆ ಅನುಮತಿ ಕೇಳಿದರೆ ಕೊಡಬೇಡಿ
    • ಸಾಲ ಕೊಡುವ ಆಪ್​ನ ವಿವರ ತಿಳಿದುಕೊಳ್ಳಿ. ವಿಳಾಸವನ್ನು ಪರಿಶೀಲಿಸಿಕೊಳ್ಳಿ
    • ಜಿಎಸ್​ಟಿ, ಪ್ರೊಸೆಸಿಂಗ್ ಶುಲ್ಕದ ಹೆಸರಲ್ಲಿ ಮುಂಚಿತವಾಗಿಯೇ ಶುಲ್ಕ ಪಡೆದರೆ ಎಚ್ಚರ ವಹಿಸಿ

    ಟಾರ್ಚರ್ ಹೇಗೆ?

    • ಕೇಳುವ ದಾಖಲೆ ಹಾಗೂ ವೈಯಕ್ತಿಕ ವಿವರ ಕೊಟ್ಟರೆ ಕೆಲವೇ ನಿಮಿಷದಲ್ಲಿ ಸಾಲ ಮಂಜೂರು.
    • ಸಾಲ ಪಡೆದರೆ ಫೋನ್​ಗಳಲ್ಲಿರುವ ಎಲ್ಲ ಕಾಂಟ್ಯಾಕ್ಟ್​ಗಳು ಆಪ್ ಆಪರೇಟರ್​ಗೆ ಸಿಗುತ್ತವೆ
    • ಸಾಲಗಾರನು ಇಎಂಐ ಪಾವತಿಸಲು ಒಂದು ದಿನ ವಿಳಂಬವಾದರೂ ಕಿರುಕುಳ ಶುರುವಾಗುತ್ತೆ
    • ಫೋನ್ ಕಾಂಟ್ಯಾಕ್ಟ್ ಲಿಸ್ಟ್​ನ ಗ್ರೂಪ್ ಸೃಷ್ಟಿಸಿ ಸಾಲ ತೀರಿಸದ ವಂಚಕ ಎಂದು ಸಂದೇಶ ರವಾನೆ
    • ಕಾಂಟ್ಯಾಕ್ಟ್ ಲೀಸ್ಟ್​ನಿಂದ ನಂಬರ್ ಪಡೆದು, ಸಾಲ ಪಡೆದವರ ಫೋಟೋ ಅಂಟಿಸಿ ರವಾನೆ
    • ಸಾಲ ಪಡೆದು ಮರುಪಾವತಿಸದ ಚೋರ್, ಫ್ರಾಡ್ ಎಂದು ಹೆಸರು ಕೊಟ್ಟು ಮಾನಹಾನಿ
    • ಕಾಂಟ್ಯಾಕ್ಟ್ ಲೀಸ್ಟ್​ನಲ್ಲಿದ್ದವರಿಗೆ ಕರೆ ಮಾಡಿ ನೀವು ಶ್ಯೂರಿಟಿಗೆ ಸಹಿ ಹಾಕಿದ್ದೀರೆಂದು ಕಿರುಕುಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts