

ತಿರುವನಂತಪುರಂ (ಕೇರಳ): ಮಹಾಮಾರಿ ಕರೊನಾ ಕುರಿತಾದ ಸಹಾಯದ ನಿರೀಕ್ಷೆಗಾಗಿ ಫೋನ್ ನಂಬರ್ ಶೇರ್ ಮಾಡಿಕೊಂಡ ಅನೇಕ ಮಹಿಳೆಯರಿಗೆ ಅಶ್ಲೀಲ ಸಂದೇಶಗಳು, ಚಿತ್ರಗಳು ಮತ್ತು ಪೋರ್ನ್ ವಿಡಿಯೋಗಳು ಬರುತ್ತಿದ್ದು, ಇಂತಹ ಕಹಿ ಅನುಭವವನ್ನು ಅನುಭವಿಸಿದ ಮಹಿಳೆಯರು ಟ್ವೀಟ್ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ.
ಒಂದು ವಾರದ ಹಿಂದೆ ಶಾಸ್ವತಿ ಶಿವ ಎಂಬಾಕೆ ಕೆಲವು ದುಷ್ಕರ್ಮಿಗಳಿಂದ ತೀವ್ರ ಮಾನಸಿಕ ನೋವು ಅನುಭವಿಸಿದ್ದಾರೆ. ಕೋವಿಡ್ ಸೋಂಕು ತಗುಲಿದ್ದ ತನ್ನ ಕುಟುಂಬದ ಸದಸ್ಯರೊಬ್ಬರಿಗೆ ಏನಾದರೂ ಅಗತ್ಯ ನೆರವು ಸಿಗಬಹುದೇನೋ ಎಂಬ ಭರವಸೆಯಿಂದ ತನ್ನ ಫೋನ್ ನಂಬರ್ ಶೇರ್ ಮಾಡಿಕೊಂಡಿದ್ದರು. ಬ್ಲಡ್ ಬ್ಯಾಂಕ್, ವೆಂಟಿಲೇಟರ್ ಬೆಡ್ ಮತ್ತು ಪ್ಲಾಸ್ಮಾ ದಾನಿ ಅಗತ್ಯವಿದೆಯೇ ಎಂಬ ಕರೆಗಳು ಸಹ ಬಂದವು.
ಆದರೆ, ಓರ್ವ ಕರೆ ಮಾಡಿ ನೀವಿನ್ನೂ ಒಂಟಿಯಾ? ನಿಮಗೆ ಮದುವೆ ಆಗಿಲ್ಲವೇ? ಎಂದು ಪ್ರಶ್ನಿಸಿದ್ದಾನೆ. ಇದರ ನಡುವೆ ಒಂದೇ ಸಮಯದಲ್ಲಿ ಏಳು ಮಂದಿ ವಿಡಿಯೋ ಕಾಲ್ ಮಾಡಿದ್ದು, ಇದರಿಂದ ಹೆದರಿದ ಶಾಸ್ವತಿ ತನ್ನ ಮೊಬೈಲ್ ಫೋನ್ ಅನ್ನು ಸೈಲೆಂಟ್ನಲ್ಲಿ ಇಡುವಂತಾಯಿತು. ವೈದ್ಯಕೀಯ ಸೌಲಭ್ಯ ಅರಸಿ ನಂಬರ್ ಶೇರ್ ಮಾಡಿಕೊಂಡವಳಿಗೆ ಇದೀಗ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ.
ಶಾಸ್ವತಿ ಒಬ್ಬರೇ ಅಲ್ಲ ಅನೇಕ ಮಹಿಳೆಯರಿಗೆ ಈ ರೀತಿಯ ಅನುಭವವಾಗಿದೆ. ರಾಥಿ ಎಂಬಾಕೆ ಟ್ವೀಟ್ ಮಾಡಿದ್ದು, ಸಹಾಯ ಕೇಳಿದ್ದಕ್ಕೆ ಏಪ್ರಿಲ್ 26 ಅನೇಕ ಅಶ್ಲೀಲ ಚಿತ್ರಗಳು ರವಾನೆ ಆಗಿವೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳಕೆದಾರ ತಮ್ಮ ಮೊಬೈಲ್ಗೆ ಪೋರ್ನ್ ವಿಡಿಯೋ ಮತ್ತು ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಇನ್ನೊರ್ವ ಟ್ವಿಟರ್ ಬಳಕೆದಾರ ತಮ್ಮ ನೋವಿನ ಮಾತನ್ನು ಅಕ್ಷರಕ್ಕಿಳಿಸಿದ್ದು, ಫೋನ್ ಮಾಡಿದ ಓರ್ವ ಫೋನ್ ಸೆಕ್ಸ್ ಬಗ್ಗೆ ಕೇಳಿದನಂತೆ. ಶಾಸ್ವತಿ ತಮಗಾದ ಅನುಭವವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಮಹಿಳೆಯರಿಗೆ ಬಂದ ಫೋನ್ ನಂಬರ್ ಅನ್ನು ಮಾಧ್ಯಮ ಬೆನ್ನತ್ತಿ ಹೋದಾಗ ಅವುಗಳು ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಇದರ ಹಿಂದೆ ಆಸ್ಪತ್ರೆಯ ಸಿಬ್ಬಂದಿಯ ಕೈವಾಡವು ಇರಬಹುದು ಎಂದು ತಿಳಿದುಬಂದಿದೆ. ನೆರವಿಗಾಗಿ ಆಸ್ಪತ್ರೆ ಮೊರೆ ಹೋದವರ ನಂಬರ್ ಶೇರ್ ಮಾಡಿ ಈ ಕುಚೇಷ್ಟೇ ಮಾಡುತ್ತಿರುವ ಸಂಶಯ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)