

ಕಾಬುಲ್: ಅಫ್ಘಾನಿಸ್ತಾನದ ಧೀರ ಮಹಿಳೆಯೊಬ್ಬಳು ತಮ್ಮ ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯಲು ಪ್ರತಿಭಟನೆಯ ವೇಳೆ ತಾಲಿಬಾನಿಗಳು ಗುಂಡಿಗೆ ಎದೆಯೊಡ್ಡಿ ನಿಂತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧೈರ್ಯ ಪ್ರದರ್ಶಿಸಿದ ಮಹಿಳೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಆಫ್ಘಾನ್ನ ಅನೇಕ ನಗರಗಳಲ್ಲಿ ತಾಲಿಬಾನಿಗಳ ವಿರುದ್ಧ ಭಾರೀ ಹೋರಾಟ ನಡೆಯುತ್ತಿದ್ದು, ಈ ಒಂದು ವೈರಲ್ ಫೋಟೋ ಅದಕ್ಕೆ ಉದಾಹರಣೆಯಾಗಿದೆ. ಈ ಫೋಟೋವನ್ನು ಮಂಗಳವಾರ ಪಾಕಿಸ್ತಾನ ವಿರೋಧಿ ಪ್ರತಿಭಟನೆಯ ವೇಳೆ ಕಾಬುಲ್ನ ಬೀದಿಯಲ್ಲಿ ಸೆರೆಹಿಡಿಯಾಗಲಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಕೆಲ ತಾಲಿಬಾನ್ ಉಗ್ರರು ಹಿಜಾಬ್ ಧರಿಸಿದ್ದ ಪ್ರತಿಭಟನಾ ನಿರತ ಮಹಿಳೆಯತ್ತ ಗನ್ ಹಿಡಿದು ನಿಂತರು. ಆದರೂ ಆ ಮಹಿಳೆ ಮಾತ್ರ ಯಾವುದಕ್ಕೂ ಹೆದರದೆ ಎದೆಯೊಡ್ಡಿ ನಿಂತರು. ಕಾಬುಲ್ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಸಮೀಪವೇ ಈ ಪ್ರಸಂಗವೆಲ್ಲ ಜರುಗಿತು.
ರಾಯಿಟರ್ಸ್ ಪತ್ರಕರ್ತ ಈ ಫೋಟೋವನ್ನು ಸರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಫೋಟೋ ತಾಲಿಬಾನ್ ವಿರುದ್ಧ ಆಫ್ಘಾನ್ ಮಹಿಳೆಯರ ನಿರ್ಣಯದ ಸಂದೇಶವನ್ನು ಸಾರಿದೆ. ತಾಲಿಬಾನ್ ಆಡಳಿತ ಅಡಿಯಲ್ಲಿ ಜೀವಿಸುವುದು ಕಷ್ಟವೆಂದು ಅರಿತಿರುವ ಹೆಣ್ಣು ಮಕ್ಕಳು ತಮ್ಮ ಹಕ್ಕುಗಳಿಗಾಗಿ ತಾಲಿಬಾನಿಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಆಫ್ಘಾನ್ ಅನೇಕ ನಗರಗಳಲ್ಲಿ ತಾಲಿಬಾನಿಗಳ ವಿರುದ್ಧ ತೀವ್ರ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ.
ತಾಲಿಬಾನ್ಗೆ ಸವಾಲಾಗಿದ್ದ ಪಂಜ್ಶೀರ್ ಪಾಂತ್ರವನ್ನು ಕುತಂತ್ರಿ ಪಾಕ್ ಸಹಾಯದಿಂದ ತಾಲಿಬಾನ್ ವಶಪಡಿಸಿಕೊಂಡ ಬೆನ್ನಲ್ಲೇ ಪಾಕ್ ವಿರುದ್ಧ ಬೀದಿಗಳಿಗೆ ಆಫ್ಘಾನ್ನ ನಾಗರಿಕರು, ಪಾಕ್ ವಿರೋಧಿ ಘೋಷಣೆಗಳನ್ನು ಕೂಗಿ ಕಾಬುಲ್ ಸೇರಿದಂತೆ ಅನೇಕ ನಗರಗಳಲ್ಲಿ ಪ್ರತಿಭಟನೆ ನಡೆಸಿದರು. ಪಾಕಿಸ್ತಾನ ರಾಯಭಾರ ಕಚೇರಿಯ ಹೊರಗಡೆ ಅನೇಕ ಆಫ್ಘಾನ್ನರು ಜಮಾಯಿಸಿದ್ದು, ಪಾಕ್ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ತಾಲಿಬಾನ್ ಸದಸ್ಯರು ಪ್ರತಿಭಟನಾಕರರನ್ನು ಚದುರಿಸಲು ಪದೇಪದೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್)