

ಮಂಗಳೂರು: ಮೆತ್ತಗಾಗಿದ್ದ ಡ್ರಗ್ ಕೇಸ್ ಮತ್ತೆ ಮರುಜೀವ ಪಡೆದುಕೊಂಡು ಆ್ಯಂಕರ್ ಕಂ ನಟಿ ಅನುಶ್ರೀ ಹೆಸರು ಮತ್ತೆ ಮುನ್ನೆಲೆಗೆ ಬರುತ್ತಿದ್ದಂತೆ ಅನುಶ್ರೀ ದಿಢೀರನೇ ಕಾಣೆಯಾಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಇನ್ನು ಅನುಶ್ರೀಗೆ ಡ್ರಗ್ ಕೇಸ್ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ವರ್ಷ ರಾಜ್ಯಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿದ್ದ ಡ್ರಗ್ ಕೇಸ್ನಲ್ಲಿ ನಟ-ನಟಿಯರು, ನಿರೂಪಕರು, ನಿರ್ಮಾಪಕ-ನಿರ್ದೇಶಕರು… ಹೀಗೆ ಸಿನಿರಂಗವನ್ನೇ ಡ್ರಗ್ಸ್ ಮಾಫಿಯಾ ಸುತ್ತಿಕೊಂಡಂತೆ ಭಾಸವಾಗಿತ್ತು. ಈ ಕೇಸ್ನಲ್ಲಿ ಅನುಶ್ರೀ ಹೆಸರೂ ಕೇಳಿಬಂದಿತ್ತು. ಖ್ಯಾತ ನಿರೂಪಕಿ-ನಟಿ ಅನುಶ್ರೀ ಅವರಿಗೂ ಸಿಸಿಬಿ ಪೊಲೀಸರು 2020ರ ಸೆಪ್ಟೆಂಬರ್ 25ರಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಡಾನ್ಸರ್ ಕಿಶೋರ್ ಶೆಟ್ಟಿಯ ಪಾರ್ಟಿಗಳಲ್ಲಿ ಅನುಶ್ರೀ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಮಂಗಳೂರಿನ ಸಿಸಿಬಿ ಕಚೇರಿಯಲ್ಲಿ ವಿಚಾರಣೆಯನ್ನೂ ಎದುರಿಸಿದ್ದರು.
ಆದರೆ, ಇದೀಗ ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಆರೋಪಿ ಸ್ಥಾನದಲ್ಲಿ ಅನುಶ್ರೀ ಹೆಸರಿಲ್ಲ. ಆರೋಪಿಗಳ ಪಟ್ಟಿಯಿಂದ ಅನುಶ್ರೀ ಹೆಸರನ್ನು ಸಿಸಿಬಿ ಪೊಲೀಸರು ಕೈಬಿಟ್ಟಿದ್ದಾರೆ. ಇನ್ನೊಂದೆಡೆ ಹೆಸರು ಬಹಿರಂಗ ಆಗ್ತಿದ್ದಂತೆ ಅನುಶ್ರೀ ನಾಪತ್ತೆಯಾಗಿದೆ.
ಇಲ್ಲಿಯೇ ಇದ್ದರೆ ಮಾಧ್ಯಮಗಳು ಬೆನ್ನತ್ತುತ್ತಾರೆಂದು ಮೊದಲೇ ಬೆಂಗಳೂರು ತೊರೆದಿರುವ ಬಗ್ಗೆ ಮಾಹಿತಿ ಇದೆ. ಅನುಶ್ರೀ ನಿವಾಸ ಯಶವಂತಪುರದ ವೈಭವ್ ಸ್ನೇಹಾ ಅಪಾರ್ಟ್ಮೆಂಟ್ನಲ್ಲಿದೆ. ನಿನ್ನೆ ಬೆಳಗ್ಗೆಯೇ ಮನೆಯಿಂದ ತೆರಳಿದ್ದಾರೆಂದು ತಿಳಿದುಬಂದಿದೆ. ಸದ್ಯ ಗಣೇಶ ಹಬ್ಬ ಇರುವ ಹಿನ್ನಲೆಯಲ್ಲಿ ಕಿರುತೆರೆಯಲ್ಲಿ ಸದ್ಯ ಯಾವುದೇ ಶೂಟಿಂಗ್ ಇಲ್ಲ. ಹೀಗಾಗಿ ಬೆಂಗಳೂರಿಂದ ನಿನ್ನೆ ಬೆಳಗ್ಗೆಯೇ ತೆರಳಿದ್ದಾರೆ ಎನ್ನಲಾಗ್ತಿದೆ. ಒಂದು ಮೂಲದ ಪ್ರಕಾರ ಅನುಶ್ರೀ ಮುಂಬೈಗೆ ಹೋಗಿರುವ ಸಾಧ್ಯತೆ ಇದೆ. ಅನುಶ್ರೀ ನಿನ್ನೆ ಬೆಳೆಗೆ 6.30ಕ್ಕೆ ಲಗೇಜು ಸಮೇತ ಮನೆಯಿಂದ ಹೊರಟರು. ಆದರೆ, ಎಲ್ಲಿಗೆ ಹೋದರೂ ಗೊತ್ತಿಲ್ಲ ಎನ್ನುತ್ತಿದೆ ಅವರ ಆಪ್ತ ಬಳಗ. (ದಿಗ್ವಿಜಯ ನ್ಯೂಸ್)