ಲವರ್​ ಜತೆ ಸೇರಿ ಗಂಡನ ಕೊಲೆ: ಕೆಮಿಕಲ್​ನಿಂದ ಮೃತದೇಹ ಕರಗಿಸಲು ಹೋದ ಪತ್ನಿಗೆ ಕಾದಿತ್ತು ಶಾಕ್​!

Wife ends Husband
Published on

ಪಟನಾ: ಪ್ರಿಯಕರನ ಜತೆಗೂಡಿ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿರುವ ಆತಂಕಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಸಾಕ್ಷ್ಯಾಧಾರ ನಾಶ ಮಾಡಲು ಗಂಡನ ಮೃತದೇಹವನ್ನು ತುಂಡರಿಸಿ, ಅದರ ಮೇಲೆ ಕೆಮಿಕಲ್​ ಸುರಿದು ಕರಗುವಂತೆ ಮಾಡಲು ಯತ್ನಿಸಿ, ಅದೇ ಕೆಮಿಕಲ್ ಸ್ಫೋಟದಿಂದ ಖತರ್ನಾಕ್​ ಪತ್ನಿ ಸಿಕ್ಕಿಬಿದ್ದಿದ್ದಾಳೆ. ​

ಈ ಘಟನೆ ಬಿಹಾರದ ಮುಜಾಫರ್​ಪುರ್​ ಏರಿಯಾದ ಸಿಖಂದರಪುರ್​ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಕೇಶ್​ (30) ಪತ್ನಿಯಿಂದಲೇ ಕೊಲೆಯಾದ ದುರ್ದೈವಿ. ಆರೋಪಿ ರಾಧಾ ತನ್ನ ಪ್ರಿಯಕರ ಸುಭಾಷ್​ ಮತ್ತು ತನ್ನ ಸಹೋದರಿ ಕೃಷ್ಣ ಮತ್ತು ಆಕೆಯ ಗಂಡನೊಂದಿಗೆ ಸೇರಿ ರಾಕೇಶ್​ನನ್ನು ಕೊಲೆ ಮಾಡಿದ್ದಾಳೆ.

ಕೊಲೆ ಮಾಡಿದ ಬಳಿಕ ಯಾರಿಗೂ ಸಾಕ್ಷಿ ಲಭ್ಯವಾಗದಂತೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದಾರೆ. ಅದರಂತೆ ಪ್ರಿಯಕರ ಸುಭಾಷ್​, ರಾಕೇಶ್​ ಮೃತದೇಹವನ್ನು ಅನೇಕ ಭಾಗಗಳಾಗಿ ಕತ್ತರಿಸಿದ್ದಾನೆ. ಬಳಿಕ ಸುಭಾಷ್​ ಮತ್ತು ರಾಧಾ ಕೆಮಿಕಲ್​ ತೆಗೆದುಕೊಂಡು ವಾಸವಿದ್ದ ಬಾಡಿಗೆ ಮನೆಯಲ್ಲೇ ಮೃತದೇಹವನ್ನು ಕರಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅವರು ಬಳಸಿದ ಕೆಮಿಕಲ್​ ಸ್ಫೋಟಗೊಂಡಿದೆ. ಇದನ್ನರಿತ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಬಾಡಿಗೆ ಮನೆಯಲ್ಲಿ ತುಂಡು ತುಂಡಾಗಿ ಬಿದ್ದಿದ್ದ ಮೃತದೇಹ ನೋಡಿ ಬೆಚ್ಚಿಬಿದ್ದಿದ್ದಾರೆ. ಬಳಿಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಆರಂಭಿಸಿದರು.

ಕೆಲವು ವರ್ಷಗಳಿಂದ ರಾಧಾ ಮತ್ತು ಸುಭಾಷ್​ ಪ್ರೀತಿಸುತ್ತಿದ್ದರು. ಗಂಡ ಕೆಲಸಕ್ಕೆಂದು ಹೊರಗಡೆ ಹೋದಾಗ ಸುಭಾಷನೇ ರಾಧಾಳನ್ನು ನೋಡಿಕೊಳ್ಳುತ್ತಿದ್ದ. ಗಂಡ ರಾಕೇಶನಿಗೆ ಗೊತ್ತಾಗದಂತೆ ರಾಧಾ ತನ್ನ ಪ್ರಿಯಕರನ ಜತೆ ಲವ್ವಿಡವ್ವಿಯಲ್ಲಿ ತೊಡಗಿದ್ದಳು. ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾಗದೇ ಕೊನೆಗೆ ಇಬ್ಬರಿಗೂ ಅಡ್ಡಿಯಾಗಿದ್ದ ಗಂಡನನ್ನೇ ಕೊಂದು ಹಾಕಲು ಪ್ರಿಯಕರನೊಂದಿಗೆ ಸೇರಿ ರಾಧಾ ಸ್ಕೆಚ್​ ಹಾಕಿದ್ದಳು. ರಾಧಾಳ ಸ್ಕೆಚ್​ಗೆ ಪ್ರಿಯಕರ ಸುಭಾಷ್​, ತನ್ನ ತಂಗಿ ಮತ್ತು ಆಕೆಯ ಗಂಡ ಸಾಥ್​ ನೀಡಿದರು. ಹಬ್ಬದ ಹಿನ್ನೆಲೆಯಲ್ಲಿ ರಾಕೇಶ್​ನನ್ನು ಮನೆಗೆ ಕರೆಸಿಕೊಂಡ ರಾಧಾ, ಪ್ರಿಯಕರ ಸುಭಾಷ್​ ಸಹಾಯ ಪಡೆದು ಕೊಲೆ ಮಾಡಿದ್ದಾಳೆ.

ಇದೀಗ ರಾಕೇಶ್​ ಸಹೋದರ ದಿನೇಶ್​ ಸಾಹ್ನಿ ದೂರು ದಾಖಲಿಸಿದ್ದು, ದೂರಿನಲ್ಲಿ ರಾಧಾ, ಪ್ರಿಯಕರ ಸುಭಾಷ್​, ಸಹೋದರಿ ಕೃಷ್ಣ ಮತ್ತು ಕೃಷ್ಣ ಗಂಡ ಕೊಲೆಗಾರರು ಎಂದು ಆರೋಪಿಸಲಾಗಿದೆ. ಕಳೆದ ಶನಿವಾರ ದಿಢೀರ್​ ಸ್ಫೋಟ ಸಂಭವಿಸಿದಾಗ ಮನೆಯ ಬಳಿ ಹೋಗಿ ನೋಡಿದಾಗ ಸಹೋದರ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net