

ಲಂಡನ್: ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ ಬ್ರಿಟನ್ ಪ್ರಧಾನಿ ಹುದ್ದೆಯಿಂದ ಬೋರಿಸ್ ಜಾನ್ಸನ್ ಅವರು ಮುಂದಿನ ದಿನಗಳಲ್ಲಿ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಒಂದು ವೇಳೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದರೆ ಮುಂದಿನ ಪ್ರಧಾನಿಯಾಗಿ ಭಾರತೀಯ ಮೂಲದ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಾಕ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.
ರಿಷಿ ಸುನಕ್ ಅವರು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ.
57 ವರ್ಷದ ಬೋರಿಸ್ ಜಾನ್ಸನ್ ವಿವಾದದ ಸುಳಿಗೆ ಸಿಲುಕಿ ಸ್ವಪಕ್ಷೀಯದವರಿಂದಲೇ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಇಡೀ ಬ್ರಿಟನ್ 2020ರ ಮೇ ತಿಂಗಳಲ್ಲಿ ಮೊದಲ ಕೋವಿಡ್ ಲಾಕ್ಡೌನ್ನಲ್ಲಿ ಇರುವಾಗ ಲಂಡನ್ನ 10 ಡ್ರೌವ್ನಿಂಗ್ ಸ್ಟ್ರೀಟ್ನಲ್ಲಿ ಪ್ರಧಾನಿ ಜಾನ್ಸನ್ ಮದ್ಯದ ಪಾರ್ಟಿ ನಡೆಸಿದ್ದರು ಎಂದು ಹೇಳಲಾಗಿದೆ. ಇದನ್ನು ಸ್ವತಃ ಪ್ರಧಾನಿಯೇ ಬುಧವಾರ ಒಪ್ಪಿಕೊಂಡಿದ್ದು, 2020ರ ಬೇಸಿಗೆಯಲ್ಲಿ ತನ್ನ ಕಚೇರಿಯಲ್ಲಿ ಪಾರ್ಟಿ ಆಯೋಜಿಸಿದ್ದಾಗಿ ಹೇಳಿದ್ದಾರೆ. ಆದರೆ, ಸಾಂಕ್ರಮಿಕ ಸಮಯದಲ್ಲಿ ತಮ್ಮ ಸಿಬ್ಬಂದಿಯ ಶ್ರಮಕ್ಕೆ ಪ್ರತಿಫಲವಾಗಿ ಈ ಕಾರ್ಯಕ್ರಮ ನಡೆಸಲಾಯಿತು ಎಂದು ಜಾನ್ಸನ್ ಸಮರ್ಥನೆಯನ್ನು ನೀಡಿದ್ದಾರೆ.
ಇನ್ನು ಪಾರ್ಟಿ ನಡೆಸಿದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಹ ಇತ್ತೀಚೆಗಷ್ಟೇ ವೈರಲ್ ಆಗಿದ್ದು, ಪ್ರತಿಪಕ್ಷ ಲೇಬರ್ ಪಾರ್ಟಿ ಮತ್ತು ತಮ್ಮದೇ ಕನ್ಸರ್ವೇಟಿವ್ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಬ್ರಿಟನ್ ಜನರ ಕೆಂಗಣ್ಣಿಗೂ ಜಾನ್ಸನ್ ಅವರ ನಡೆ ಗುರಿಯಾಗಿದ್ದು, ಅವರ ಖ್ಯಾತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇದು ಪಕ್ಷದ ಮೇಲೆ ಪರಿಣಾಮ ಬೀಳಲಿದೆ ಎಂಬುದು ಸ್ವಪಕ್ಷದ ನಾಯಕರ ಅಭಿಪ್ರಾಯವಾಗಿದೆ.
ಈ ವಿವಾದದ ಬಗ್ಗೆ ಲಂಡನ್ನ ಹೌಸ್ ಆಫ್ ಕಾಮನ್ನಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕ್ಷಮೆಯಾಚನೆ ಮಾಡಿದರೂ ಕೂಡ ಅವರದೇ ಕನ್ಸರ್ವೇಟಿವ್ ಪಕ್ಷದ ನಾಯಕರು ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸರ್ಕಾರವೇ ಮಾಡಿದ ಲಾಕ್ಡೌನ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಜನರಿಗೆ ತಪ್ಪು ಸಂದೇಶವನ್ನು ರವಾನಿಸಿದ್ದಾರೆ. ಸರ್ಕಾರದ ಮೇಲೆ ಜನರ ಭಾವನೆ ಬದಲಾಗುವಂತೆ ಜಾನ್ಸನ್ ನಡೆದುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಕೂಡ ಸರಿಯಾದ ನಿರ್ವಹಣೆ ಮಾಡಲಿಲ್ಲ ಅಂತಾ ಸಾಲು ಸಾಲು ಆರೋಪಗಳು ಜಾನ್ಸನ್ ವಿರುದ್ಧ ಕೇಳಿಬಂದಿದ್ದು, ರಾಜೀನಾಮೆಗೆ ಬೇಡಿಕೆ ಹೆಚ್ಚಾಗಿದೆ. ಡೌನಿಂಗ್ ಸ್ಟ್ರೀಟ್ ಮತ್ತು ಇತರ ಎಲ್ಲಾ ಸರ್ಕಾರಿ ಕ್ವಾರ್ಟರ್ಗಳಲ್ಲಿ ನಡೆದಿರುವ ಲಾಕ್ಡೌನ್ ಉಲ್ಲಂಘನೆಗಳ ಕುರಿತು ಹಿರಿಯ ನಾಗರಿಕ ಸೇವಕ ಸ್ಯೂ ಗ್ರೇ ಅವರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.
ಮುಂದಿನ ಪ್ರಧಾನಿ ರೇಸ್ನಲ್ಲಿ ರಿಷಿ ಸುನಕ್
ಒಂದು ವೇಳೆ ಒತ್ತಾಯಕ್ಕೆ ಮಣಿದು ಜಾನ್ಸನ್ ರಾಜೀನಾಮೆ ನೀಡಿದರೆ, ಮುಂದಿನ ಬ್ರಿಟನ್ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲ ಕೂಡ ಗರಿಗೆದರಿದೆ. ಆ ರೇಸ್ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಜಾನ್ಸನ್ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ರಿಷಿ ಸುನಕ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಬುಧವಾರ ಜಾನ್ಸನ್ ಅವರು ಹೌಸ್ ಆಫ್ ಕಾಮನ್ನಲ್ಲಿ ಕ್ಷಮೆಯಾಚಿಸುವಾಗ ಸುನಕ್ ಗೈರಾಗಿದ್ದರು. ಆದರೆ, ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು ಪ್ಲಾನ್ ಫಾರ್ ಜಾಬ್ ಯೋಜನೆಯ ನಿರಂತರ ಕೆಲಸ ಮತ್ತು ಇಂಧನ ಪರಿಸ್ಥಿತಿ ಬಗ್ಗೆ ಸಂಸದರೊಂದಿಗೆ ಚರ್ಚಿಸಬೇಕಾದ್ದರಿಂದ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ. ಆದರೆ, ಗೈರಿನ ಹಿಂದೆ ಮತ್ತೊಂದು ಊಹಾಪೋಹ ಹರಿದಾಡುತ್ತಿದೆ. ಜಾನ್ಸನ್ ಅವರಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದಲೇ ಅವರು ಗೈರಾಗಿದ್ದರು ಎನ್ನಲಾಗಿದೆ. 2020ರ ಫೆಬ್ರವರಿಯಲ್ಲಿ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ 2020ರಲ್ಲಿ ಕೋವಿಡ್ ಭೀತಿಯ ಮಧ್ಯೆಯು ಮೊದಲ ಬಜೆಟ್ ಮಂಡಿಸಿದ ಸುನಕ್ ಅವರನ್ನು ವಿಶ್ಲೇಷಕರು ಮತ್ತು ಮಾಧ್ಯಮದವರು ಕೊಂಡಾಡಿದ್ದರು. ಅಲ್ಲದೆ, ಕೋವಿಡ್ ಸಂದರ್ಭದಲ್ಲೂ ಆರ್ಥಿಕ ಉತ್ತೇಜನಕ್ಕಾಗಿ ರಿಷಿ ಸುನಕ್ ಅವರು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು.
ಇನ್ನು ಹಣಕಾಸು ಸಚಿವರಾಗಿ ಆಯ್ಕೆಯಾದಾಗಿನಿಂದ ರಿಷಿ ಸುನಕ್ ಅವರಿಗೆ ಪ್ರಧಾನಿ ಹುದ್ದೆಯ ಮೇಲೆಯೂ ತುಂಬಾ ಉತ್ಸಾಹವನ್ನು ಹೊಂದಿದ್ದಾರೆ. ಅಲ್ಲದೆ, ಪಕ್ಷದಲ್ಲೂ ಅವರಿಗೆ ಒಳ್ಳೆಯ ಬೆಂಬಲವಿದೆ ಮತ್ತು ಯುವ ನಾಯಕರಾಗಿರುವ ಅವರಿಗೆ ಸಾರ್ವಜನಿಕರ ವಲಯದಲ್ಲೂ ಜನಮನ್ನಣೆ ಇರುವುದರಿಂದ ಮುಂದಿನ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾದರೂ ಅಚ್ಚರಿಪಡಬೇಕಾಗಿಲ್ಲ. ಆದಾಗ್ಯೂ ಇನ್ನು ಅನೇಕರು ಪ್ರಧಾನಿ ರೇಸ್ನಲ್ಲಿರುವುದು ತಿಳಿದುಬಂದಿದೆ. ಆದರೆ, ಜಾನ್ಸನ್ ರಾಜೀನಾಮೆ ನೀಡಿದರೆ ಅಂತಿಮವಾಗಿ ಯಾರು ಪ್ರಧಾನಿ ಸ್ಥಾನಕ್ಕೇರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)