ಈತ ಸಾಮಾನ್ಯನಲ್ಲ... 5 ನಿಮಿಷದಲ್ಲಿ 102 ಕೆಜಿ ಗಾತ್ರದ ಗುಂಡುಕಲ್ಲನ್ನು 30 ಬಾರಿ ಎತ್ತಿದ ಬಲಭೀಮ!

Lifting Stone
Published on

ವಿಜಯವಾಡ: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಪ್ರತಿಯೊಂದು ಗ್ರಾಮಗಳಲ್ಲೂ ಬಹಳ ವಿಭಿನ್ನವಾಗಿ ಆಚರಿಸುತ್ತಾರೆ. ಕೆಲವು ಗ್ರಾಮಗಳಲ್ಲಿ ಸಾಂಪ್ರದಾಯಿಕ ಸ್ಪರ್ಧೆಯನ್ನು ಸಹ ಆಯೋಜಿಸಲಾಗುತ್ತದೆ. ಅದರಲ್ಲಿ ಗುಂಡುಕಲ್ಲು ಎತ್ತುವ ಸ್ಪರ್ಧೆಯು ಒಂದು.

ಸಂಕ್ರಾಂತಿ ವಿಶೇಷವಾಗಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಫಿರಂಗಿಪುರಂ ವಲಯದ ವೇಮುಲುರಿಪಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಗುಂಡು ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಬಲಶಾಲಿಯೊಬ್ಬ ಸ್ಪರ್ಧೆ ನೋಡಲು ನೆರದಿದ್ದವರನ್ನು ಚಕಿತಗೊಳಿಸಿದ್ದಾರೆ.

ನರಸರಾವ್​ಪೇಟೆ ಮಂಡಲದ ಪಾಮಿಡಿಪಡು ಮೂಲದ ಮದ್ದಲಿ ವೀರಾಂಜನೆ ಎಂಬಾತ 102 ಕೆಜಿ ಕಲ್ಲು ಗುಂಡನ್ನು ಕೇವಲ 5 ನಿಮಿಷದಲ್ಲಿ 30 ಬಾರಿ ಎತ್ತುವ ಮೂಲಕ ಎಲ್ಲರನ್ನು ಬೆರುಗು ಮಾಡಿದ್ದಲ್ಲದೆ, ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.

ವೀರಾಂಜನೆ ಅವರು ಪ್ರಥಮ ಬಹುಮಾನವಾಗಿ 5,116 ರೂಪಾಯಿ ಗೆದ್ದು ಬೀಗಿದರು. 5 ನಿಮಿಷದಲ್ಲಿ 28 ಬಾರಿ ಗುಂಡು ಎತ್ತುವ ಮೂಲಕ ಮಚವಾರಮ್​ ಮಂಡಲದ ಪಿನ್ನಲ್ಲಿ ಮೂಲದ ಕ್ಯಾಟ್​ ಶೋಭನ್ ಎರಡನೇ ಸ್ಥಾನ ಪಡೆದರೆ, ಎನ್​ ರಾಮಾಂಜನೇಯು ಎಂಬಾತ 27 ಬಾರಿ ಎತ್ತುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಸ್ಥಳೀಯರಾದ ಭೀಮನಾಥ ಆಂಜಮ್ಮ ಹಾಗೂ ವೆಂಕಟ ಸುಬ್ಬಯ್ಯ ಅವರ ಸ್ಮರಣಾರ್ಥ ಸತತ 9ನೇ ವರ್ಷ ಗುಂಡು ಕಲ್ಲು ಎತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net