

ಮುಂಬೈ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿ ಮತ್ತು ಏನೇ ಮಾಡಿದರೂ ವಿಭಿನ್ನವಾಗಿ ಮಾಡಬೇಕೆನ್ನುವುದು ಅವರ ಹಂಬಲ. ಇದೀಗ ಮಕರ ಸಂಕ್ರಾಂತಿಯಂದು ದೇಶದ ಜನತೆಗೆ ಶುಭಕೋರುವ ವಿಚಾರದಲ್ಲೂ ವಿಭಿನ್ನತೆಯನ್ನು ಆರ್ಜಿವಿ ಮೆರೆದಿದ್ದಾರೆ.
ಹಬ್ಬದ ಶುಭಕೋರಲು ಆರ್ಜಿವಿ ಸರಣಿ ಟ್ವೀಟ್ ಮಾಡಿದ್ದು, ಅದನ್ನು ನೋಡಿ ಅನೇಕ ನೆಟ್ಟಿಗರು ಹೌಹಾರಿದ್ದಾರೆ. ಮೊದಲ ಟ್ವೀಟ್ನಲ್ಲಿ ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಕೋರಿದ್ದಾರೆ. ಮುಕೇಶ್ ಅಂಬಾನಿಗಿಂತ ಹೆಚ್ಚಿನ ಹಣ ಮತ್ತು ದೊಡ್ಡ ಮನೆಯನ್ನು ದೇವರು ಕರುಣಿಸಲಿ ಮತ್ತು ಪ್ರಸ್ತುತ ಹಾಗೂ ಭವಿಷ್ಯದಲ್ಲಿ ನಿಮಗೆ ಯಾವುದೇ ವೈರಸ್ ತಗುಲದಿರಲಿ ಮತ್ತು ಎಲ್ಲ ಗಂಡು ಮಕ್ಕಳಿಗೆ ವಿಶ್ವದಲ್ಲೇ ಅತ್ಯಂತ ಸುಂದರಿಯರು ಸಿಗಲಿ ಹಾಗೂ ಎಲ್ಲ ಹೆಣ್ಣು ಮಕ್ಕಳಿಗೆ ವಿಶ್ವದಲ್ಲೇ ಅತ್ಯಂತ ಹ್ಯಾಂಡ್ಸಮ್ ಬಾಯ್ ಸಿಗಲಿ ಎಂದು ಆರ್ಜಿವಿ ಶುಭಕೋರಿದ್ದಾರೆ.
ಎರಡನೇ ಟ್ವೀಟ್ನಲ್ಲಿ ಸಮಸ್ತ ಗಂಡಂದಿರ ಸಮುದಾಯಕ್ಕೆ ಆರ್ಜಿವಿ ಶುಭಕೋರಿದ್ದು, ನಿಮ್ಮ ನಿಮ್ಮ ಹೆಂಡತಿಯರು ನೀವು ಹೇಳಿದಂತೆಯೇ ಕೇಳಲಿ ಮತ್ತು ನೀವು ಏನೇ ಮಾಡಿದರೂ, ಮಾಡದಿದ್ದರೂ ಓಕೆ ಎನ್ನಬೇಕು ಅನ್ನುವ ನಿಮ್ಮ ಬಯಕೆಯನ್ನು ದೇವರು ಈಡೇರಿಸಲಿ ಎಂದಿದ್ದಾರೆ.
ಮೂರನೇ ಟ್ವೀಟ್ನಲ್ಲಿ ಸಣ್ಣ ಸಿನಿಮಾ ತಯಾರಿಕರಿಗೆ ಶುಭಕೋರಿದ್ದು, ನಿಮ್ಮ ಎಲ್ಲ ಸಣ್ಣ ಸಿನಿಮಾಗಳು ಬಾಹುಬಲಿಗಿಂತ ಹೆಚ್ಚಿನ ಯಶಸ್ಸು ದೊರೆಯಲಿ ಎಂದಿದ್ದಾರೆ. ಕೊನೆಯ ಟ್ವೀಟ್ನಲ್ಲಿ ತಮ್ಮ ಶತ್ರುಗಳಿಗೆ ಶುಭಕೋರುವ ಮೂಲಕ ಆರ್ಜಿವಿ ತಿರುಗೇಟು ನೀಡಿದ್ದಾರೆ. ಎಲ್ಲ ನನ್ನ ಶತ್ರುಗಳಿಗೆ ನಾನು ಆದಷ್ಟು ಬೇಗ ಸಾಯಬೇಕು ಎಂಬ ನಿಮ್ಮ ಬಯಕೆಯನ್ನು ದೇವರು ಈಡೇರಿಸಲಿ ಎಂದಿದ್ದಾರೆ. ಈ ರೀತಿಯ ಸರಣಿ ಟ್ವೀಟ್ ಮೂಲಕ ಆರ್ಜಿವಿ ಮತ್ತೆ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾ ಟಿಕೆಟ್‌ಗಳ ಬೆಲೆಯನ್ನು ಇಳಿಸಲು ಎಪಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಆರ್ಜಿವಿ ಸರಣಿ ಟ್ವೀಟ್‌ಗಳು ಮತ್ತು ವೀಡಿಯೊಗಳ ಮೂಲಕ ಪ್ರಶ್ನೆ ಮಾಡಿದ್ದರು. (ಏಜೆನ್ಸೀಸ್)