ರೈಲು ನಿಲ್ದಾಣದಲ್ಲಿ ನೀರು ತರಲು ಹೋದ ಪತ್ನಿ ಮರಳಲೇ ಇಲ್ಲ: ಸಿಸಿಟಿವಿ ನೋಡಿದ ಪತಿಗೆ ಶಾಕ್​!

Railway Station 1
Published on

ಹೈದರಾಬಾದ್​: ರಾಜಸ್ಥಾನಕ್ಕೆ ತೆರಳಲೆಂದು ಪತ್ನಿ ಮತ್ತು ಮಗನೊಂದಿಗೆ ರೈಲು ನಿಲ್ದಾಣಕ್ಕೆ ಹೋದಕ್ಕೆ ವ್ಯಕ್ತಿಗೆ ಕೆಲವೇ ಹೊತ್ತಿನಲ್ಲಿ ಊಹಿಸದ ಆಘಾತವೊಂದು ಕಾದಿತ್ತು. ಖುಷಿಯಾಗಿಯೇ ಪತಿಯ ಜತೆ ರೈಲು ನಿಲ್ದಾಣಕ್ಕೆ ಬಂದ ಪತ್ನಿ ನೀರು ತರುವುದಾಗಿ ಹೇಳಿ ಹೋದವಳು ಮತ್ತೆ ಹಿಂದಿರುಗಲೇ ಇಲ್ಲ.

ಅಷ್ಟಕ್ಕೂ ಅಲ್ಲಿ ನಡೆದಿದ್ದು ಪತಿಯ ಹೃದಯ ಬಿರಿಯುವಂಥದ್ದು. ವಿವರಣೆಗೆ ಬರುವುದಾದರೆ, ರಾಜಸ್ಥಾನದ ಜೋಧ್​ಪುರ ಜಿಲ್ಲೆಯ ಬಾರಿ ಖಾಕೊಂಡ ಗ್ರಾಮದ ನಿವಾಸಿ ಪ್ರಭುದಾಸ್​ ಎಲ್​ ಆ್ಯಂಡ್​ ಟಿ ಹೆಸರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ರಮ್ಯಾ ಎಂಬಾಕೆಯನ್ನು ಪ್ರೀತಿಸಿ 2018ರಲ್ಲಿ ವಿವಾಹವಾಗಿದ್ದಾರೆ. ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಎರಡು ವರ್ಷದ ಒಬ್ಬ ಮಗನಿದ್ದಾನೆ.

ಹೀಗಿರುವಾಗ ಏಪ್ರಿಲ್​ 2ರಂದು ಪ್ರಭುದಾಸ್​ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಹೈದರಾಬಾದ್​ನಲ್ಲಿರುವ ತನ್ನ ಅಜ್ಜಿ ಮನಗೆ ತೆರಳಿದ್ದ. ಎರಡು ದಿನಗಳವರೆಗೆ ಅಲ್ಲಿಯೇ ಉಳಿದುಕೊಂಡಿದ್ದ. ಬಳಿಕ ಏಪ್ರಿಲ್​ 4ರಂದು ರಾಜಸ್ಥಾನಕ್ಕೆ ಹಿಂದಿರುಗಲು ರೈಲು ಟಿಕೆಟ್​ ಬುಕ್​ ಮಾಡಿದ್ದ. ಹೊರಡಬೇಕಾದ ದಿನ ಬೆಳಗ್ಗೆ 9 ಗಂಟೆಗೆ ತನ್ನ ಪತ್ನಿ ಮತ್ತು ಮಗನೊಂದಿಗೆ ಪ್ರಭುದಾಸ್​ ಸಿಕಂದರಬಾದ್​ ರೈಲು ನಿಲ್ದಾಣಕ್ಕೆ ಬಂದಿದ್ದ. ರೈಲಿಗಾಗಿ ಕಾಯುವ ನಡುವೆ ಮಗನೊಂದಿಗೆ ನೀರು ತರಲೆಂದು ಹೊರ ಹೋದ ಪ್ರಭುದಾಸ್​ ಪತ್ನಿ ಮರಳಿ ಬರಲೇ ಇಲ್ಲ. ​

ಅನೇಕ ಸಮಯದವರೆಗೂ ಕಾದರು ಪತ್ನಿ ಬರದಿದ್ದಾಗ ತಕ್ಷಣ ಗೋಪಾಲಪುರಂ ಪೊಲೀಸ್​ ಠಾಣೆಗೆ ತೆರಳಿ ಪ್ರಭುದಾಸ್​ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೈಲು ನಿಲ್ದಾಣ ಸಮೀಪದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಭುದಾಸ್​ ಪತ್ನಿ ಬೇರೊಬ್ಬನ ಬೈಕ್​ನಲ್ಲಿ ಪರಾರಿಯಾಗಿರುವುದು ಗೊತ್ತಾಗಿದೆ.

ಹೋಗುವಾಗ 20 ಸಾವಿರ ರೂ. ಹಣ ಮತ್ತು 2 ಪೌಂಡ್​ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿರುವುದಾಗಿ ಪ್ರಭುದಾಸ್​ ದೂರಿದ್ದಾರೆ. ಬೈಕ್​ ನಂಬರ್​ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net